ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಸೇರಿದ ಆವರಣದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ₹1.98 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ತಿಳಿಸಿದರು.
ಶಾಲಾ ಕೊಠಡಿಯ ಕಾಮಗಾರಿಗೆ ಶುಕ್ರವಾರ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಂಕಾಪುರ ಗ್ರಾಮದಿಂದ ಕನಕಗಿರಿ-ಕೊಪ್ಪಳ ಮುಖ್ಯ ರಸ್ತೆವರೆಗೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ₹2.70 ಕೋಟಿ, ಪಟ್ಟಣದ ನೀರಲೂಟಿ ವೃತ್ತದಿಂದ ಮಲ್ಲಿಗೆವಾಡ ಗ್ರಾಮದ ರಸ್ತೆವರೆಗೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ₹1.50 ಲಕ್ಷ, ಕೆ.ಮಲ್ಲಾಪುರ - ಕರಡೋಣ ಸರ್ಕಲ್‌ನಿಂದ ಗುಡದೂರು ಗ್ರಾಮದವರೆಗೆ ರಸ್ತೆ ಡಾಂಬರೀಕರಣಕ್ಕೆ ₹2 ಕೋಟಿ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘100 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು ಸಚಿವರು ₹43 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಶೀಘ್ರದಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು’ ಎಂದು ತಿಳಿಸಿದರು.
‘ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು ₹60 ಲಕ್ಷ ಮಂಜೂರಾಗಿದೆ. ಕೆಲ ಕಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಮುಖ್ಯಶಿಕ್ಷಕ ತುಳಜಾ ನಾಯಕ್, ಕಾಂಗ್ರೆಸ್ ವಕ್ತಾರ ಶರಣಬಸಪ್ಪ ಭತ್ತದ, ವೀರೇಶ ಸಮಗಂಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಿದ್ದಾರ್ಥ ಕಲ್ಲಬಾಗಿಲಮಠ, ರಾಕೇಶ ಕಂಪ್ಲಿ, ಶರಣೆಗೌಡ ಪೊಲೀಸ್ ಪಾಟೀಲ, ಅನಿಲಕುಮಾರ ಬಿಜ್ಜಳ, ನಾಮನಿರ್ದೇಶಕ ಶಾಂತಪ್ಪ ಬಸರಿಗಿಡದ, ಗಂಗಾಧರ ಚೌಡ್ಕಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹನುಮೇಶ ವಾಲೇಕಾರ, ಪ್ರಮುಖರಾದ ಟಿ.ಜೆ. ರಾಮಚಂದ್ರ, ಮದರಸಾಬ ಸಂತ್ರಾಸ್ ಸೇರಿದಂತೆ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.