ಕನಕಗಿರಿ: ‘ಕರಡಿಗುಡ್ಡ ಗ್ರಾಮದ ವೆಂಕಟೇಶ್ವರ ದೇವಸ್ಥಾನ ಮುಂಭಾಗದಿಂದ ಪಾದಗಟ್ಟೆವರೆಗೂ ರಸ್ತೆ ಅಭಿವೃದ್ಧಿಗೆ ₹43.41 ಲಕ್ಷ ಹಾಗೂ ಚಿಕ್ಕಮಾದಿನಾಳ, ರಾಮದುರ್ಗ ರಸ್ತೆ ಮಧ್ಯೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ₹1.50 ಕೋಟಿ ಬಿಡುಗಡೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ತಾಲ್ಲೂಕಿನ ರಾಮದುರ್ಗಾ- ಚಿಕ್ಕಮಾದಿನಾಳ ಗ್ರಾಮದ ಬ್ರಿಡ್ಜ್ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ತೊಂದರೆಯಾಗಿಲ್ಲ, ಕ್ಷೇತ್ರದ ಎಲ್ಲಾ ಗ್ರಾಮಗಳ ರಸ್ತೆ ಸುಧಾರಣೆ, ಡಾಂಬರೀಕರಣ, ಇತರೆ ಸೌಲಭ್ಯಗಳನ್ನು ಒದಗಿಸಲು ಕೋಟ್ಯಂತರ ಅನುದಾನ ನೀಡಲಾಗಿದೆ’ ಎಂದರು.
ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರಾಜಶೇಖರ, ಪಿಐ ಎಂ.ಡಿ. ಪೈಜುಲ್ಲಾ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಬ್ಲಾಕ್ ಅಧ್ಯಕ್ಷ ಸಮಿತಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶ ಸಮಗಂಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಂತಗೌಡ, ತಾಲ್ಲೂಕು ಎನ್ಎಸ್‌ಯುಐ ಘಟಕ ಅಧ್ಯಕ್ಷ ಮಂಜುನಾಥ ರಾಮದುರ್ಗ, ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣೇಗೌಡ, ಅನಿಲಕುಮಾರ, ರಾಜಾಸಾಬ, ಶಾಂತಪ್ಪ ಬಸರಿಗಿಡದ, ಬಗರ್ ಹುಕಂ ಸಮಿತಿ ಸದಸ್ಯ ಕೊಮಾರೆಪ್ಪ ನರಿ, ಪ್ರಮುಖರಾದ ಸಿದ್ದಪ್ಪ ನಿರಲೂಟಿ, ಟಿ.ಜೆ ರಾಮಚಂದ್ರ, ಹನುಮೇಶ ವಾಲೇಕಾರ, ಹಾಗೂ ಪಿಡಿಓ ಬಸವರಾಜ ಸಂಕನಾಳ ಇದ್ದರು.
ಇದೇ ಸಂದರ್ಭದಲ್ಲಿ ರಾಮದುರ್ಗ ಗ್ರಾಮದಲ್ಲಿ 2024-25 ನೇ ಸಾಲಿನ ತಾಲ್ಲೂಕು ಪಂಚಾಯಿತಿಯ ಅನುದಾನದಡಿಯಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವ ತಂಗಡಗಿ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.