ಕೊಪ್ಪಳ: ಗುರುಪೂರ್ಣಿಮೆ ಅಂಗವಾಗಿ ನಗರದ ವಿವಿಧ ದೇವಸ್ಥಾನಗಳಲ್ಲಿ ಗುರುವಾರ ಗುರುವಿನ ಸ್ಮರಣೆ ಮಾಡಲಾಯಿತು. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಇಲ್ಲಿನ ಭಾಗ್ಯನಗರ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನಕ್ಕೆ ಮೊದಲೇ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ಬಂದು ಭಕ್ತರು ದರ್ಶನ ಪಡೆದರು. ಪುಷ್ಪಾಲಂಕಾರ, ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನದ ವೇಳೆ ಜನಸಂದಣಿ ಹೆಚ್ಚಿತ್ತು.
ದೇವಸ್ಥಾನಗಳಲ್ಲಿ ಭಕ್ತರಿಗಾಗಿ ಗೋದಿ ಹುಗ್ಗಿ, ಅನ್ನ, ಸಾಂಬಾರು, ಬದನೆಕಾಯಿ ಪಲ್ಲೆಯ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಾಯಿಬಾಬಾ ವಾರವಾದ ಗುರುವಾರವೇ ಗುರುಪೂರ್ಣಿಮೆ ಬಂದಿದ್ದರಿಂದ ಪ್ರತಿವರ್ಷಕ್ಕಿಂತ ಭಕ್ತರ ಸಂಖ್ಯೆ ಹೆಚ್ಚಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಸೇರಿದಂತೆ ಅನೇಕರು ಭೇಟಿ ನೀಡಿದರು.
ಗವಿಸಿದ್ಧೇಶ್ವರ ಮಠ, ರಾಯರ ಮಠ, ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರ ಜನಸಂದಣಿ ಕಂಡುಬಂತು. ಸಮೀಪದ ಭಾಗ್ಯನಗರದ ತಾಯಮ್ಮ ದೇವಿಯ ಸನ್ನಿಧಿಯಲ್ಲಿ ಕಾಕಡಾರತಿ, ಗುರುಹೋಮ, ಪುಷ್ಪಾರ್ಚನೆ, ಮಹಾಮಂಗಳಾರತಿ ನೆರವೇರಿತು. ಭಾಗ್ಯನಗರದ ನೀಲಕಂಠೇಶ್ವರ ದೇವಸ್ಥಾನ, ಮಹರ್ಷಿ ವಾಲ್ಮೀಕಿ ದೇವಸ್ಥಾನ, ಮಾರ್ಕಂಡೇಶ್ವರ, ರಾಮನ ದೇವಸ್ಥಾನ, ಶಂಕರಾಚಾರ್ಯ ಮಠಗಳಲ್ಲಿಯೂ ಕಾರ್ಯಕ್ರಮ ನಡೆದವು.
ಗುರು ಸ್ಮರಣೆ ಭಜನೆ ಕಾರ್ಯಕ್ರಮ:
ಭಾಗ್ಯನಗರದ ಶಂಕರಾಚಾರ್ಯ ಮಠದಲ್ಲಿ ಶಿವಪ್ರಕಾಶಾನಂದ ಸ್ವಾಮೀಜಿ ಮತ್ತು ಶಿವರಾಮ ತಾತನವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.