ಕುಷ್ಟಗಿ: ದೈಹಿಕ, ಮಾನಸಿಕ ಅಂಗವೈಕಲ್ಯಕ್ಕೆ ಒಳಗಾಗಿರುವವರ ಕುಂದುಕೊರತೆ ಚರ್ಚಿಸಲು, ಸರ್ಕಾರದ ಸೌಲಭ್ಯ ತಲುಪಿಸುವುದು ಮತ್ತು ಅವರಲ್ಲಿ ಮನೋಬಲವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಮ್ಮೆ ವಿಶೇಷ ಸಭೆ ನಡೆಸಿ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ. ಆದರೆ ಸಭೆಯನ್ನೇ ನಡೆಸದೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿಯಲ್ಲಿ ಕೇಳಿಬಂದಿದೆ.
ಅಂಗವಿಕಲರ ಕಲ್ಯಾಣ ಇಲಾಖೆಯೇ ನೇಮಿಸಿದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿ ಸುಳ್ಳು ದಾಖಲೆಗಳ ಮೂಲಕ ಅಂಗವಿಕಲರ ಸಭೆ ನಡೆಸಿರುವುದಾಗಿ ತಾಲ್ಲೂಕು ಪಂಚಾಯಿತಿಯಲ್ಲಿ ಕಚೇರಿ ಹೊಂದಿರುವ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ (ಎಂಆರ್‌ಡಬ್ಲೂ) ಕಾರ್ಯಕರ್ತರಿಗೆ ಸುಳ್ಳು ವರದಿ ನೀಡಿದ್ದಾರೆ. ಇದರ ದಾಖಲೆಗಳು 'ಪ್ರಜಾವಾಣಿ'ಗೆ ಲಭ್ಯವಾಗಿದೆ.
ವರದಿಯಲ್ಲಿರುವುದೇನು?: 'ಗ್ರಾಮ ಪಂಚಾಯಿತಿಯಲ್ಲಿ ಡಿ.30ರಂದು ಪಂಚಾಯಿತಿ ಮಟ್ಟದ ಎಲ್ಲ ಹಳ್ಳಿಗಳ ಅಂಗವಿಕಲರ ಮತ್ತು ವಿಶೇಷ ಸಮನ್ವಯ ಗ್ರಾಮಸಭೆ ಕರೆಯಲಾಗಿತ್ತು. ಇದರಲ್ಲಿ ಎಲ್ಲ ಅಂಗವಿಕಲರು ಭಾಗವಹಿಸಿದ್ದರು. ಎಲ್ಲ ಸಮಸ್ಯೆ, ಕುಂದುಕೊರತೆ, ಸರ್ಕಾರದ ಸೌಲಭ್ಯಗಳ ಬಗ್ಗೆ ಚರ್ಚಿಸಲಾಗಿ ಎಲ್ಲ ಅಂಗವಿಕಲರೂ ಸಮ್ಮತಿ ಸೂಚಿಸಿದರು' ಎಂದು ಹೇಳಲಾಗಿದೆ. ಆದರೆ ವರದಿಗೆ ಲಗತ್ತಿಸಿರುವ ಛಾಯಾಚಿತ್ರ ಡಿ. 30ರಂದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರೌಢಶಾಲೆಯ ಬಿಸಿಯೂಟ ಯೋಜನೆಗೆ ಸಂಬಂಧಿಸಿದ್ದು. ಅಲ್ಲದೆ ವರದಿಯಲ್ಲಿ 12 ಜನ ಅಂಗವಿಕಲರ ಸಹಿ ನಕಲು ಮಾಡಿರುವುದು ಕಂಡುಬಂದಿದೆ.
ವಿಶೇಷ ಸಭೆಯ ಚಿತ್ರದಲ್ಲಿ ಬ್ಯಾನರ್ ಇಲ್ಲ, ಮೊಬೈಲ್ ಗ್ರೂಪ್‌ಗೆ ಮಾಹಿತಿ ಹಾಕಿಲ್ಲ. ವರದಿಯಲ್ಲಿ ಸಮರ್ಪಕ ಮಾಹಿತಿಯೂ ಇಲ್ಲ. ಫೋಟೊ ಗಮನಿಸಿದರೆ ಅನುಮಾನ ಬರುತ್ತಿದೆ ಈ ಬಗ್ಗೆ ಪರಿಶೀಲಿಸುವುದಾಗಿ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಹಿರೇಮನಿ 'ಪ್ರಜಾವಾಣಿ'ಗೆ ತಿಳಿಸಿದರು. ಈ ಕುರಿತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಕುಂಬಾರ ಅವರನ್ನು ಸಂಪರ್ಕಿಸಿದರೆ ಸ್ಪಷ್ಟ ಉತ್ತರ ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.