ಯಲಬುರ್ಗಾ: ಸ್ಥಳೀಯ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿ ಮತ್ತೆ ಒಂದಾದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಜೆ.ರಂಗಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಎರಡು ಪಕ್ಷಗಾರರ ನಡುವಿನ ಸಂದಾನ ಪ್ರಕ್ರಿಯೆ ಯಶಸ್ವಿಯಾಗಿದ್ದು, ಕೂಡಿ ಹೊಸ ಜೀವನ ಪ್ರಾರಂಭಿಸುವುದಾಗಿ ಮನಸಾರೆ ಒಪ್ಪಿಕೊಂಡು ಹೋಗಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಆತುರದಲ್ಲಿ ನಿರ್ಧಾರ ಕೈಗೊಂಡು ಪ್ರತ್ಯೇಕಗೊಳಿಸುವ ಬದಲು ಸಮಕ್ಷಮ ಮಾತುಕತೆ ನಡೆಸಿ ಎರಡು ಕಡೆಯಿಂದ ಒಮ್ಮತದ ನಿರ್ಧಾರ ತೆಗೆದುಕೊಂಡು ಹೊಂದಾಣಿಕೆ ಮಾಡಿ ಜೀವನ ರೂಪಿಸಿಕೊಳ್ಳುವಂತೆ ಪ್ರೇರೇಪಿಸುವುದು ಮುಖ್ಯ ಎಂದು ನ್ಯಾಯಾಧೀಶರು ಹೇಳಿದರು.
ಅದಾಲತ್‌ನಲ್ಲಿ ಒಟ್ಟು 292 ಪ್ರಕರಣಗಳ ಪಟ್ಟಿಯಲ್ಲಿ 266 ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಅವುಗಳ ಪೈಕಿ ಶೇ 70ರಷ್ಟು ವಿಭಾಗ ಪ್ರಕರಣಗಳಾಗಿವೆ. 3 ಮೋಟರ್ ವಾಹನ ಅಪಘಾತ, ನಷ್ಟ ಪರಿಹಾರ ಪ್ರಕರಣಗಳಲ್ಲಿ ಅರ್ಜಿದಾರರು ಪರಿಹಾರ ಪಡೆದುಕೊಂಡರು. ಬ್ಯಾಂಕಿನ ಸಾಲ ವಸೂಲಾತಿ, ಜನನ ದಿನಾಂಕ ನೋಂದಣಿಗೆ ಸಂಬಂಧಿಸಿದ 190 ಪಕರಣಗಳಲ್ಲಿ ಸಮಸ್ಯೆ ಬಗೆಹರಿಸಿ ಪರಿಹಾರ ಕಂಡುಕೊಳ್ಳಲಾಯಿತು.
ಹಿರಿಯ ವಕೀಲ ಬಿ.ಎಂ.ಶಿರೂರು, ಎಸ್.ಎಸ್.ಮಾದಿನೂರ, ಎಂ.ಎಸ್. ನಾಯ್ಕರ್, ಸಂಧಾನಕಾರ ವಿಜಯಲಕ್ಷ್ಮಿ ನವಲಗುಂದ್, ಎಚ್.ಎನ್.ನಡುಲಮನಿ, ಉದಯ್ ಮಾಳಗಿ, ನಾಗರಾಜ್ ಹವಾಲಾರ್, ಶಿವರಾಜ್ ಬಣಕಾರ್, ದಾದುಸಾಬ್ ಎಲಿಗಾರ್, ಹನುಮಂತ ಬಂಗಾಳಿ, ರಫಿ ನದಾಫ್, ಮಹಿಳಾ ವಕೀಲರಾದ ಎಂ.ಎಸ್. ಸಾವಳಗಿಮಠ, ಸಾವಿತ್ರಿ ಗೊಲ್ಲರ್, ರಾಘವೇಂದ್ರ ಮಹಮ್ಮದ್ ರಫಿ, ಜಮುನಾ, ವಿನಾಯಕ್ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.