ಕನಕಗಿರಿ: ಮೌರ್ಯರ ಅಶೋಕ ಹಾಗೂ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕನಕಗಿರಿಯೂ ಐತಿಹಾಸಿಕ, ಧಾರ್ಮಿಕವಾಗಿ ಪ್ರಸಿದ್ದಿ ಪಡೆದಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಭಾಗದಲ್ಲಿ ಸೂರ್ಯಕಾಂತಿ, ಶೇಂಗಾ, ಮೆಕ್ಕೆ ಜೋಳ, ಸಜ್ಜೆ, ಹೆಸರು, ಮಡಿಕೆ, ಜೋಳ ಇತರೆ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ದೀಪಾವಳಿ ಸಮಯ ಎಂದರೆ ರೈತರಿಗೆ ಇನ್ನಿಲ್ಲದ ಹಿಗ್ಗು. ತಾವು ಕಷ್ಟಪಟ್ಟು ಬಿತ್ತನೆ ಮಾಡಿ ಬೆಳೆದ ಬೆಳೆಗಳ ಲಾಭ ಕೈಗೆ ಸಿಗುವಂತ ದಿನಗಳು.
ವರ್ತಕರಿಗೂ ಸಹ ದೀಪಾವಳಿ ಹಬ್ಬ ಅಚ್ಚುಮೆಚ್ಚು. ದಲ್ಲಾಳಿ ಅಂಗಡಿಯ ವರ್ತಕರು, ಕಿರಾಣಿ ಇತರೆ ಅಂಗಡಿ ಮುಂಗಟ್ಟುಗಳ ಮಾಲೀಕರು, ರೈತರು ಈ ಸಲದ ದೀಪಾವಳಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ರೈತರು ಉತ್ತಮ ಬೆಳೆ ಬೆಳೆದರೆ ಮಾತ್ರ ದಲ್ಲಾಳಿ ವರ್ತಕರು, ಕಿರಾಣಿ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತದೆ. ಮಳೆ ಇಲ್ಲವಾದರೆ ದೀಪಾವಳಿ ಆಚರಣೆಯ ಖುಷಿಯೇ ಇರುವುದಿಲ್ಲ.
ಮಳೆಯಾಧಾರಿತ ಪ್ರದೇಶವಾಗಿರುವ ಕನಕಗಿರಿ ತಾಲ್ಲೂಕಿನಲ್ಲಿ ಈ ಸಲ ನಿರೀಕ್ಷಿತ ಮಳೆ ಬಿದ್ದಿದೆ. ಹೀಗಾಗಿ ಒಣಭೂಮಿ ಪ್ರದೇಶ ಹಾಗೂ ಪಂಪಸೆಟ್ ಹೊಂದಿದ ರೈತರ ಮೊಗದಲ್ಲಿ ದೀಪಾವಳಿ ಮಂದಹಾಸ ಮೂಡಿಸಿದೆ. ಎಪಿಎಂಸಿ ಗಂಜ್, ಎಪಿಎಂಸಿ ಮಳಿಗೆ, ನವಲಿ, ನೀರ್ಲೂಟಿ ರಸ್ತೆ , ಮಹರ್ಷಿ ವಾಲ್ಮೀಕಿ ವೃತ್ತ, ತಾವರಗೇರಾ ರಸ್ತೆ, ರಾಜಬೀದಿ ಸೇರಿದಂತೆ ಪಟ್ಟಣದ ಅಂಗಡಿ, ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಭರದ ಸಿದ್ದತೆ ನಡೆದಿದೆ.
ದಲ್ಲಾಳಿ ಅಂಗಡಿಕಾರರು ಶೇಂಗಾ, ಸೂರ್ಯಕಾಂತಿ, ಮೆಕ್ಕೆ ಜೋಳ, ಸಜ್ಜೆ, ಜೋಳ ಇತರೆ ದ್ವಿದಳ ಧಾನ್ಯಗಳ ಮೊಟೆಗಳನ್ನು ಅಂಗಡಿ, ಗೋಧಾಮುಗಳಿಂದ ಹೊರ ತೆಗೆದು ಸ್ವಚ್ಛಗೊಳಿಸಿದ್ದಾರೆ. ಅಂಗಡಿಗಳನ್ನು ಸುಣ್ಣ ಬಣ್ಣ, ತಳಿರು, ತೋರಣಗಳಿಂದ ಶೃಂಗಾರ ಮಾಡಿದ್ದಾರೆ. ಟ್ಯ್ರಾಕ್ಟರಿ, ಲಾರಿ, ಮಿನಿ ಬಸ್, ಕಾರು ಇತರೆ ವಾಹನಗಳ ಮಾಲೀಕರು, ಚಾಲಕರು ತಮ್ಮ ವಾಹನಗಳನ್ನು ಹೂವು, ಬಾಳೆಗೊನೆಗಳಿಂದ ಅಲಂಕಾರಗೊಳಿಸಿ ಕನಕಾಚಲಪತಿ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ದೀಪಾವಳಿ ಹಬ್ಬದ ಪೂಜೆಗೆ ಬೇಕಾದ ವಿವಿಧ ನಮೂನೆಯ ಹಣ್ಣು, ಹೂವಿನ ಹಾರ, ಅಡಿಕೆ ಹೂವು, ಚೆಂಡು ಹೂ, ಮಾವಿನಕಾಯಿ ಎಲೆ, ಇತರೆ ಸಾಮಾಗ್ರಿಗಳನ್ನು ರಾಜಬೀದಿ ಸೇರಿದಂತೆ ಇತರೆ ಸ್ಥಳದಲ್ಲಿ ಮಾರಾಟ ಮಾಡಲಾಗುತ್ತಿದ್ದು ವರ್ತಕರು ಖರೀದಿಗೆ ಮುಗಿ ಬೀಳುತ್ತಾರೆ, ಚೌಕಾಸಿ ಮಾಡಿ ಖರೀದಿಸಿ ಅಂಗಡಿಗಳಿಗೆ ತೆಗೆದುಕೊಂಡು ಹೋಗುತ್ತಾರೆ.
ವರ್ಷಪೂರ್ತಿ ಅಂಗಡಿ, ಮುಂಗಟ್ಟುಗಳಲ್ಲಿ ಮೈ ಮೆತ್ತಗಾಗಿಸಿಕೊಂಡು ದುಡಿದ ಹಮಾಲರು, ಗುಮಾಸ್ತರು, ಕಾರ್ಮಿಕರು ಸಂತೋಷದಿಂದ ಹಬ್ಬ ಆಚರಣೆ ಮಾಡಲಿ ಎನ್ನುವ ಕಾರಣಕ್ಕೆ ಅಂಗಡಿಗಳ ಮಾಲೀಕರು ಹೊಸ ಬಟ್ಟೆ ಕೊಡಿಸುತ್ತಾರೆ. ಹಬ್ಬದ ದಿನ ಮನೆಗೆ ಕರೆದುಕೊಂಡು ಹೋಗಿ ಸಿಹಿ ಊಟ ನೀಡಿ ಸಂತಸ ಪಡಿಸುತ್ತಾರೆ. ಖುಷಿ ರೂಪದಲ್ಲಿ ಒಂದಿಷ್ಟು ನಗದು ಹಣವನ್ನು ಉಡುಗೊರೆಯಾಗಿ ಕೊಡುತ್ತಾರೆ. ಮನೆ, ಅಂಗಡಿಗಳಲ್ಲಿ ಎಣ್ಣೆ ದೀಪ, ಆಲಂಕಾರಿಕ ಆಕಾಶಪುಟ್ಟಿಗಳು ಗಮನ ಸೆಳೆಯುತ್ತಲಿವೆ.
ಮಕ್ಕಳು, ಯುವತಿಯರು, ಮಹಿಳೆಯರು ಹೊಸ ಬಟ್ಟೆ, ಬೆಲೆ ಬಾಳುವ ಬಂಗಾರದ ಆಭರಣ ಧರಿಸಿ ತಮ್ಮ ಅಂಗಡಿಗಳಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಲಕ್ಷ್ಮೀ ಪೂಜೆಗೆ ಬಂದ ಅತಿಥಿಗಳಿಗೆ ಅಂಗಡಿಕಾರರು ಉತ್ತುತ್ತಿ, ಕಲ್ಲುಸಕ್ಕರೆ, ಬಾಳೆಹಣ್ಣು, ಎಲೆ ಅಡಿಕೆ, ಗೋಡಂಬೆ, ದ್ರಾಕ್ಷಿ ಇತರೆ ಸಿಹಿ ತಿನ್ನಿಸು ನೀಡಿ ಗೌರವಿಸಲಾಗುತ್ತಿದೆ.
ಲಾಭ, ನಷ್ಟ ಇರಲಿ ಹಣ್ಣು, ಹೂವಿನ ವ್ಯಾಪಾರ ಮಾಡುವುದು ನಮಗೆ ಅನಿವಾರ್ಯವಾಗಿದೆ ಮೂರು ದಿನಗಳ ಕಾಲ ಟೆಂಟ್ ಹಾಕಿ ವ್ಯಾಪಾರ ಮಾಡುತ್ತೇವೆ ಎಂದು ಹಣ್ಣು, ಹೂವಿನ ಮಾರಾಟಗಾರರು ತಿಳಿಸಿದರು. ಬೆಲೆ ಏರಿಕೆ, ಬರದ ನಡುವೆ ದೀಪಾವಳಿಯನ್ನು ಆಚರಿಸಬೇಕಾದ ಅನಿವಾರ್ಯತೆ ವರ್ತಕರಿಗೆ ಇದೆ, ತುಟ್ಟಿಯಾದರೂ ಚಿಂತೆಯಿಲ್ಲ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ ಹಬ್ಬ ಆಚರಿಸಲಾಗುತ್ತಿದೆ ಎಂದು ವರ್ತಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.