ADVERTISEMENT

Ganesha Festival | ಡಿ.ಜೆ ಬಳಕೆ: ಪೊಲೀಸರ ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:18 IST
Last Updated 1 ಸೆಪ್ಟೆಂಬರ್ 2025, 7:18 IST
ಕುಷ್ಟಗಿಯ ಕಾರ್ಗಿಲ್‌ ಮಲ್ಲಯ್ಯ ವೃತ್ತದ ಬಳಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಭಾನುವಾರ ಸಾರ್ವಜನಿಕರಿಗೆ ಸಾಮೂಹಿಕ ಪ್ರಸಾದ ವಿತರಿಸಲಾಯಿತು
ಕುಷ್ಟಗಿಯ ಕಾರ್ಗಿಲ್‌ ಮಲ್ಲಯ್ಯ ವೃತ್ತದ ಬಳಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಭಾನುವಾರ ಸಾರ್ವಜನಿಕರಿಗೆ ಸಾಮೂಹಿಕ ಪ್ರಸಾದ ವಿತರಿಸಲಾಯಿತು   

ಕುಷ್ಟಗಿ: ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ ಧ್ವನಿವರ್ಧಕ ಬಳಸವುದನ್ನು ನಿಷೇಧಿಸಿ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಹೊರಡಿಸಿದ ಆದೇಶಕ್ಕೆ ಪಟ್ಟಣದಲ್ಲಿ ಸಂಘಟನೆಗಳು ಕವಡೆಕಾಸಿನ ಕಿಮ್ಮತ್ತು ನೀಡದಿರುವುದು ಮತ್ತು ಪೊಲೀಸರು ಅಸಹಾಯಕರಾಗಿದ್ದು ಭಾನುವಾರ ಕಂಡುಬಂದಿತು.

ಪ್ರಮುಖ ಸ್ಥಳಗಳಲ್ಲಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಐದನೇ ದಿನ ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಮೂರು ನಾಲ್ಕು ಕಡೆ ಡಿ.ಜೆ ಧ್ವನಿವರ್ಧಕ ಬಳಸಲಾಯಿತು. ಭಾರಿ ಪ್ರಮಾಣದ ಶಬ್ದಕ್ಕೆ ಸಂಘಟನೆಗಳ ಪ್ರಮುಖರು, ಯುವಕರು, ಮಕ್ಕಳು ಹುಚ್ಚೆದ್ದು ಕುಣಿದರು. ಕಿವಿಡಗಚಿಕ್ಕುವ ಶಬ್ದ ಮಾಲಿನ್ಯದಿಂದ ಸುತ್ತಲಿನ ಪ್ರದೇಶದಲ್ಲಿ ಯಾರ ಮಾತುಗಳೂ ಕೇಳಿಸದಂತಾಗಿತ್ತು. ಅಷ್ಟೇ ಅಲ್ಲ ಡಿ.ಜೆ ಸದ್ದಿಗೆ ಜನರ ಹೃದಯಗಳೇ ಅದುರಿದಂತಾಯಿತು. ಅದರಲ್ಲೂ ಮಕ್ಕಳು, ವೃದ್ಧರ ಎದೆ ಬಡಿತ ಹೆಚ್ಚಿದಂತೆ ಭಾಸವಾಯಿತು. ಆಸ್ಪತ್ರೆಗಳ ಬಳಿಯಲ್ಲಿಯೂ ಡಿ.ಜೆ ಶಬ್ದ ಮಿತಿಮೀರಿದ್ದರಿಂದ ರೋಗಿಗಳೂ ತೊಂದರೆ ಅನುಭವಿಸಿದರು ಎಂದು ಹೆಸರು ಬಹಿರಂಗಪಡಿಸದ ಸಾರ್ವಜನಿಕರು ವಿವರಿಸಿದರು.

‘ಡಿ.ಜೆ ಬಳಕೆ ಮಾಡದಂತೆ ಸರ್ಕಾರ ನಿರ್ದೇಶನ ಸ್ಪಷ್ಟವಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಿದ್ದರಾದರೂ ಅವು ಕಾಟಾಚಾರದ ಆದೇಶ ಎನ್ನುವಂತಾಯಿತು. ಸರ್ಕಾರದ ಆದೇಶವನ್ನು ಪಾಲಿಸುವಲ್ಲಿ ಪೊಲೀಸರು ವಿಫಲರಾದರು. ಮೂರನೇ ದಿನದ ಗಣೇಶ ವಿಸರ್ಜನೆ ಸಂದರ್ಭದಲ್ಲೂ ಇದೇ ರೀತಿ ಡಿ.ಜೆ ಧ್ವನಿವರ್ಧಕಕ್ಕೆ ಪೊಲೀಸರೇ ಪರೋಕ್ಷ ಅವಕಾಶ ಕಲ್ಪಿಸಿದ್ದರು’ ಎಂದು ಜನರು ಆರೋಪಿಸಿದರು.

ADVERTISEMENT

ಸಾರ್ವಜನಿಕರ ಆರೋಪ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಪಿಐ ಯಶವಂತ ಬಿಸನಳ್ಳಿ, ಡಿ.ಜೆ ಬಳಕೆ ಮಾಡಿರುವ ಕುರಿತು ಏನನ್ನೂ ಹೇಳಲಿಲ್ಲ. ಆದರೆ ‘ಶಬ್ದ ಕಡಿಮೆ ಮಾಡಿಸುತ್ತೇವೆ’ ಎಂದಷ್ಟೇ ಸ್ಪಷ್ಟಪಡಿಸಿದರು.

ಡಾಬಾಗಳಲ್ಲಿ ಯಥೇಚ್ಛ ಮದ್ಯ

ಈ ಮಧ್ಯೆ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಅದರಂತೆ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಮದ್ಯದ ಅಂಗಡಿಗಳು ಬಾರ್‌ ಮತ್ತು ರೆಸ್ಟೊರೆಂಟ್‌ಗಳು ಬಂದ್‌ ಆಗಿದ್ದವು. ಆದರೆ ಪಟ್ಟಣ ಹಾಗೂ ಹಳ್ಳಿಗಳ ಸುತ್ತಲಿನ ಪ್ರದೇಶಗಳಲ್ಲಿರುವ ಅನೇಕ ಡಾಬಾಗಳಲ್ಲಿ ಮದ್ಯ ನಿಷೇಧ ಇರಲಿಲ್ಲ. ಮೊದಲೇ ಯಥೇಚ್ಛ ಮದ್ಯ ಸಂಗ್ರಹಿಸಲಾಗಿತ್ತು. ಒಬ್ಬರ ಮೇಲೆಯೂ ಸಿವಿಲ್‌ ಮತ್ತು ಅಬಕಾರಿ ಪೊಲೀಸರು ಕ್ರಮ ಜರುಗಿಸದಿರುವುದು ಅಚ್ಚರಿ ಮೂಡಿಸಿತು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.