ಕೊಪ್ಪಳ: ರಾಜ್ಯ ಸರ್ಕಾರವು ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಆರಂಭಿಸುವ ನೆಪದಲ್ಲಿ 25 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡುತ್ತಿದೆ ಎಂದು ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆರೋಪಿಸಿದೆ.
ವೇದಿಕೆಯ ಜಿಲ್ಲಾಧ್ಯಕ್ಷ ದೇವರಾಜ ಕಿನ್ನಾಳ ಇತ್ತೀಚೆಗೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಇತ್ತೀಚೆಗೆ ಬೆಂಗಳೂರಿನಲ್ಲಿ ಎಸ್‌ಡಿಎಂಸಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯ ಸಮಿತಿ ಸಭೆ ನಡೆದಿದ್ದು ಅದರಲ್ಲಿ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಸರ್ಕಾರ ಯಾವುದೇ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ರಾಜ್ಯ ಶಿಕ್ಷಣ ನೀತಿ ಆಯೋಗ ರೂಪಿಸಿರುವ ಶಿಕ್ಷಣ ನೀತಿಯನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಜಾರಿಗೆ ತರಬೇಕು. ಉತ್ತಮ ಎಸ್‌ಡಿಎಂಸಿಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು’ ಎಂದು ಒತ್ತಾಯಿಸಿದರು.
‘ಶಿಕ್ಷಣ ಹಕ್ಕು ಕಾಯ್ದೆ 2009ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಿಯಾ ಯೋಜನೆ ರೂಪಿಸಬೇಕು. ಪೂರ್ವ ಪ್ರಾಥಮಿಕದಿಂದಲೇ ಆಂಗ್ಲ ಮಾಧ್ಯಮ ಜಾರಿಗೊಳಿಸುವುದನ್ನು ಬಿಟ್ಟು ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಕನಿಷ್ಠ ಎಂಟನೇ ತರಗತಿ ತನ್ನಕ ಮಾತೃಭಾಷೆ ಕಲಿಕೆ ಜಾರಿಗೆ ಮಾಡಬೇಕು’ ಎಂದು ಆಗ್ರಹಿಸಿದರು.
ಸಂಘಟನೆಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಚ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿತಾ ಕಾಸರ್, ಜಿಲ್ಲಾ ಉಪಾಧ್ಯಕ್ಷ ಗವಿಸಿದ್ದಪ್ಪ ಬದವಟ್ಟಿ ಹಾಗೂ ತಾಲ್ಲೂಕು ಅಧ್ಯಕ್ಷ ಸಂಜಯದಾಸ ಕೌಜಗೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.