ADVERTISEMENT

ಕನಕಗಿರಿ: ಮಳೆ ನೀರು ವ್ಯರ್ಥ ಮಾಡಬೇಡಿ

ಗ್ರಾಮೀಣ ಅನುಭವ ಶಿಬಿರದಲ್ಲಿ ಕೃಷಿ ವಿದ್ಯಾಲಯ ಪ್ರಾಧ್ಯಾಪಕ ಉಮೇಶ ಸಲಹೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:35 IST
Last Updated 29 ನವೆಂಬರ್ 2020, 13:35 IST
ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರ ನಡೆದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಅನುಭವ ಶಿಬಿರದಲ್ಲಿ ಧಾರವಾಡ ಕೃಷಿ ವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಿದ್ದರು
ಕನಕಗಿರಿ ಸಮೀಪದ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರ ನಡೆದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಅನುಭವ ಶಿಬಿರದಲ್ಲಿ ಧಾರವಾಡ ಕೃಷಿ ವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಿದ್ದರು   

ಕನಕಗಿರಿ: ಸಮೀಪದ ಹುಲಿಹೈದರ ಗ್ರಾಮದಲ್ಲಿ ಧಾರವಾಡ ಕೃಷಿ ವಿದ್ಯಾಲಯದ ಬಿ.ಎಸ್‌ಸಿ (ಕೃಷಿ ) ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಅನುಭವ ಶಿಬಿರ ನಡೆಯಿತು.

ಪ್ರಾಧ್ಯಾಪಕ ಡಾ. ಉಮೇಶ ಉಳಿಹಳ್ಳಿ ಮಾತನಾಡಿ,‘ರಾಜ್ಯದಲ್ಲಿ ಕೋವಿಡ್ -19 ಹಾವಳಿ ಇರುವ ಕಾರಣ ಈ ಸಲ ಕೃಷಿ ವಿದ್ಯಾಲಯದಲ್ಲಿ ಕಲಿಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಗ್ರಾಮೀಣ ಅನುಭವ ಶಿಬಿರವನ್ನು ಆಯಾ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳ ರೈತರೊಂದಿಗೆ ಮುಕ್ತವಾಗಿ ಚರ್ಚಿಸಿ ಮಾಹಿತಿ ಸಂಗ್ರಹಿಸಬೇಕು’ ಎಂದು ತಿಳಿಸಿದರು.

ರೈತರು ಹೊಂದಿರುವ ಕೃಷಿ ಜ್ಞಾನವನ್ನು ಪಡೆದುಕೊಂಡು ತಾವು ಕಲಿತಿರುವ ವಿದ್ಯೆಯನ್ನು ರೈತರಿಗೆ ತಿಳಿಸಿ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಪ್ರಾಧ್ಯಾಪಕ ಸಿ.ಬಿ. ಮೇಟಿ ಮಾತನಾಡಿ,‘ವಿದ್ಯಾರ್ಥಿಗಳು ಹಳ್ಳಿಗಳಲ್ಲಿರುವ ರೈತರ ನಿಜವಾದ ಜೀವನವನ್ನು ಅರಿತುಕೊಳ್ಳಬೇಕು. ಹೊಲದ ಮಣ್ಣು, ಲಭ್ಯವಿರುವ ನೀರು, ಬೆಳೆಗಳಿಗೆ ತಗಲುವ ರೋಗಗಳು, ಮಿಶ್ರ ಬೆಳೆ, ಪಶುಸಂಗೋಪನೆ ಕುರಿತು ಮಾಹಿತಿ ಪಡೆದುಕೊಂಡು ರೈತರಿಗೆ ಸಲಹೆ, ಸೂಚನೆ ನೀಡಬೇಕು’ ಎಂದು ತಿಳಿಸಿದರು.

ಮಳೆ ನೀರನ್ನು ಭೂಮಿಯಲ್ಲಿ ಹರಿದು ಹೋಗದಂತೆ ತಡೆ ಹಿಡಿದು ಕೃಷಿ ಮಾಡಬೇಕು ಎಂದು ಹೇಳಿದರು.

ವಿದ್ಯಾರ್ಥಿನಿ ಸೌಂದರ್ಯ ನಾಯಕ ಮಾತನಾಡಿ,‘ದೇಶಕ್ಕೆ ಕೃಷಿ ಬೆನ್ನೆಲುಬಾಗಿದೆ. ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳುವಂಥ ಬೆಳೆಗಳನ್ನು ಬೆಳೆಯಬೇಕು’ ಎಂದು ಹೇಳಿದರು.

ಕೃಷಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರೈತರ ಕುಟುಂಬದ ಆಶ್ರಿತರ ಸಂಖ್ಯೆ, ಬೆಳೆ, ಇಳುವಳಿ, ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಅಧಿಕಾರಿಗಳಾದ ಎಸ್. ಮುಬಿನಾ, ಚನ್ನಬಸಪ್ಪ, ರಾಯಚೂರು ಕೃಷಿ ವಿದ್ಯಾಲಯದ ಆಡಳಿತ ಮಂಡಳಿಯ ಮಾಜಿ ಸದಸ್ಯ ಹನುಮೇಶ ನಾಯಕ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹನುಮಂತಪ್ಪ ಜಾಡಿ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.