ADVERTISEMENT

ಹನಿ ನೀರಾವರಿ ಯೋಜನೆ ರೈತರಿಗೆ ವರ: ಅಮರೇಶ ಕರಡಿ

25 ಗ್ರಾಮಗಳ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:37 IST
Last Updated 20 ಸೆಪ್ಟೆಂಬರ್ 2020, 3:37 IST
ಹನಿ ನೀರಾವರಿಯ ಕಾಮಗಾರಿ ಸ್ಥಳಕ್ಕೆ ಶನಿವಾರ ಕೆಡಿಪಿ ಸದಸ್ಯ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಭೇಟಿ ನೀಡಿ ಪರಿಶೀಲಿಸಿದರು
ಹನಿ ನೀರಾವರಿಯ ಕಾಮಗಾರಿ ಸ್ಥಳಕ್ಕೆ ಶನಿವಾರ ಕೆಡಿಪಿ ಸದಸ್ಯ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಭೇಟಿ ನೀಡಿ ಪರಿಶೀಲಿಸಿದರು   

ಕೊಪ್ಪಳ: ಬಹುನಿರೀಕ್ಷಿತ ಕೊಪ್ಪಳ- ಯಲಬುರ್ಗಾ ಹನಿನೀರಾವರಿ ಯೋಜನೆಯು ಈ ಭಾಗದ ರೈತರಿಗೆ ವರವಾಗಲಿದೆ. ಇದರ ಕಾಮಗಾರಿ ಪ್ರಗತಿಯಲ್ಲಿದ್ದು 25 ಸಾವಿರ ಎಕರೆ ಪ್ರದೇಶಕ್ಕೆ ಇದರಿಂದ ನೀರು ದೊರಕಲಿದೆ. ರೈತರ ಜೀವನ ಕೂಡ ಹಸನಾಗಲಿದೆ ಎಂದು ಕೆಡಿಪಿ ಸದಸ್ಯ, ಬಿಜೆಪಿ ಯುವ ಮುಖಂಡ ಅಮರೇಶ ಕರಡಿ ಹೇಳಿದ್ದಾರೆ.

ಕೊಪ್ಪಳ ತಾಲ್ಲೂಕಿನ ಕವಲೂರು-ಗುಡಗೇರಿ ರಸ್ತೆಯ ಮಾರ್ಗದಲ್ಲಿ ನಡೆಯುತ್ತಿರುವ ಹನಿನೀರಾವರಿಯ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪ್ರಗತಿ ಪರಿಶೀಲಿಸಿ ಅವರು ಪತ್ರಿಕಾ ಹೇಳಿಕೆ ನೀಡಿದರು.

ಪಕ್ಕದಲ್ಲೆ ತುಂಗಭದ್ರಾ ನದಿ ಹರಿಯುತ್ತಿದ್ದರೂ ಇದುವರೆಗೂ ಕೊಪ್ಪಳ ತಾಲೂಕಿನ ಅನೇಕ ಗ್ರಾಮಗಳಿಗೆ ಕುಡಿಯಲು ಮತ್ತು ಕೃಷಿಗಾಗಿ ನೀರು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ‎₹ 750 ಕೋಟಿ ಅನುದಾನ ನೀಡಿ ಹನಿನೀರಾವರಿ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ADVERTISEMENT

ಈ ಕಾಮಗಾರಿ ಪೂರ್ಣಗೊಂಡರೆ ಎರಡೂ ತಾಲ್ಲೂಕಿನ ಸುಮಾರು 25 ಸಾವಿರ ಎಕರೆ ಪ್ರದೇಶ ಹಚ್ಚಹಸಿರಾಗಲಿದೆ. ಆ ಮೂಲಕ ನಮ್ಮ ಭಾಗದ ರೈತರ ಬದುಕು ಹಸನಾಗಲಿದೆ ಎಂದಿದ್ದಾರೆ.

ಈ ಯೋಜನೆ ಬಹಳ ವರ್ಷದ ಹಿಂದೆಯೆ ಆಗಬೇಕಿತ್ತು. ಆದರೆ ತಡವಾಗಿಯಾದರೂ ಈಗ ಯೋಜನೆ ಜಾರಿಗೆ ಬಂದಿದ್ದು ನಮಗೆಲ್ಲ ಸಂತಸ ಮೂಡಿಸಿದೆ. ಈಗಾಗಲೇ ಹನಿನೀರಾವರಿ ಯೋಜನೆಯ ಕಾಮಗಾರಿ‌ ಭರದಿಂದ ಸಾಗಿದೆ. ಕವಲೂರು ಗುಡಗೇರಿ ಮಧ್ಯೆಭಾಗದ ಜಾಗದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಈ ಕೆಲಸ ಮುಗಿದ ಬಳಿಕ ಪೈಪ್ ಲೈನ್ ಸೇರಿದಂತೆ ಇತರೆ ಕೆಲಸಗಳು ನಡೆಯಲಿವೆ ಎಂದರು.

ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ಡಿಸ್ಟ್ರಿಬ್ಯೂಟರ್ ಸೆಂಟರ್ ಅಳವಡಿಸಲಾಗುವುದು. ಅಲ್ಲಿಂದ ಎರಡೂ ತಾಲ್ಲೂಕಿನ ಸುಮಾರು 20 ರಿಂದ 25 ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಹೆಚ್ಚಾಗಿ ಏತನೀರಾವರಿ ಯೋಜನೆಯಡಿ ಕಾಲುವೆಗಳ ಮೂಲಕ ನೀರು ಸಿಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಹನಿನೀರಾವರಿ ಮೂಲಕ‌ ರೈತರಿಗೆ ನೀರು ಒದಗಿಸಲಾಗಿದೆ. ಈ ತರದ ಯೋಜನೆ ಯಶಸ್ವಿಯಾಗಿದ್ದು ಕೊನೆ ಹಂತದ ಭಾಗದ ರೈತರಿಗೂ ನೀರು ದೊರಕುತ್ತದೆ. ಹನಿ ನೀರಾವರಿಯಿಂದಾಗಿ ನೀರು ಹೆಚ್ಚಾಗಿ ಪೋಲಾಗುವುದು ತಪ್ಪುತ್ತದೆ. ಈ ಯೋಜನೆಯಿಂದಾಗಿ ಒಣ ಬೇಸಾಯ ಮಾಡುತ್ತಿದ್ದ ರೈತರು ನೀರಾವರಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಎಪಿಎಂಸಿ ಸದಸ್ಯ ಬಸವರಾಜ ಈಶ್ವರಗೌಡ್ರು, ಕವಲೂರು ನಿಂಗಪ್ಪ, ವೀರಯ್ಯಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.