ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆ: ಮಧು ಬಂಗಾರಪ್ಪ

ಹಿರೇವಂಕಲಕುಂಟಾ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 5:52 IST
Last Updated 8 ಜುಲೈ 2025, 5:52 IST
ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸೋಮವಾರ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅವರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸೋಮವಾರ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಅವರು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು   

ಯಲಬುರ್ಗಾ: ‘ವಿದ್ಯಾರ್ಥಿ ಅನುತ್ತೀರ್ಣನಾದರೆ ಅದು ಆತನ ಸೋಲಲ್ಲ. ಪೋಷಕರು, ಶಿಕ್ಷಕರು, ಶಿಕ್ಷಣ ಸಚಿವ ಹಾಗೂ ಇಲಾಖೆಯ ಸೋಲು. ಮಕ್ಕಳಿಗೆ ಸರಿಯಾಗಿ ಜ್ಞಾನ ಕೊಡಲು ಸಾಧ್ಯವಾಗದಿದ್ದರೆ ಅದು ನಮ್ಮೆಲ್ಲರ ವೈಫಲ್ಯ. ಆದ್ದರಿಂದ ಗುಣಮಟ್ಟದ ಶಿಕ್ಷಣ ಕೊಡಬೇಕು ಎನ್ನುವ ವಿಚಾರವೇ ನನ್ನ ಆದ್ಯತೆಯಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಸೋಮವಾರ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು,‘ಮಕ್ಕಳಿಗೆ ಬಿಸಿಯೂಟ, ಹಾಲು, ಪಠ್ಯ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಹಾಗೂ ವಿಶೇಷವಾಗಿ ಮಕ್ಕಳ ಪೌಷ್ಟಿಕ ಬೆಳವಣಿಗೆಗೆ ರಾಗಿ ಮಾಲ್ಟ್ ಕೊಡಲಾಗುತ್ತಿದೆ. ಒಂದು ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ ಎರಡ್ಮೂರು ವರ್ಷಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಕಡಿಮೆಯಾಗಿದೆ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲರೂ ಉನ್ನತ ಸ್ಥಾನಗಳಲ್ಲಿದ್ದಾರೆ. ನಮ್ಮ ಸರ್ಕಾರ ಬಂದ ಮೊದಲ 11 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹಂತ ಹಂತವಾಗಿ ಶಿಕ್ಷಕರ ಕೊರತೆ ನೀಗಿಸಲಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಬೇಕಾಗುವ ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ADVERTISEMENT

ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ,‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳನ್ನು ಪೂರೈಸಿದ್ದು, ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಯಲಬುರ್ಗಾ ಕ್ಷೇತ್ರದಲ್ಲಿ 16 ಹೊಸ ಶಾಲೆಗಳು ಮತ್ತು 7 ಹೊಸ ಜೂನಿಯರ್ ಕಾಲೇಜುಗಳು ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ತಲಾ ಒಂದು ಹೊಸ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಹಿರೇವಂಕಲಕುಂಟಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ತಳವಾರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಡಿಡಿಪಿಯು ಜಗದೀಶ್, ಮುಖಂಡರಾದ ಹನುಮಂತಗೌಡ ಚಂಡೂರು, ಮಹೇಶ ಹಳ್ಳಿ, ಅಶೋಕ ತೋಟದ, ಕರೆಬಸಪ್ಪ ನಿಡಗುಂದಿ, ಹನುಮಂತಗೌಡ, ಶಾಲೆಯ ಮುಖ್ಯಶಿಕ್ಷಕ ಬಾಬುಸಾಬ ಲೈನ್ದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

- ಎಲ್ಲ ಕ್ಷೇತ್ರಗಳಿಗೂ ರಾಯರಡ್ಡಿ ಗಮನಹರಿಸಲಿ: ಬಯ್ಯಾಪುರ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೂ ಆದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಮಾತನಾಡಿ‘ರಾಯರಡ್ಡಿ ಸಂಸದರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೇವಲ ಯಲಬುರ್ಗಾ ಕ್ಷೇತ್ರಕ್ಕಷ್ಟೇ ನಾಯಕರಾಗದೇ ಜಿಲ್ಲೆಯ ಉಳಿದ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆಯೂ ಗಮನ ಹರಿಸಬೇಕು. ರಾಜ್ಯಮಟ್ಟದ ನಾಯಕರಾಗಬೇಕು’ ಎಂದರು. ‘ಯಲಬುರ್ಗಾ ಕ್ಷೇತ್ರಕ್ಕಿಂತಲೂ ಕುಷ್ಟಗಿ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಅವಕಾಶ ಎನ್ನುವ ನಿಯಮವಿದೆ. ಹೀಗಾದರೆ ಹೊರಗಿನ ಮಕ್ಕಳಿಗೆ ಅನ್ಯಾಯವಾಗುತ್ತದೆ. ಸಾಮಾಜಿಕ ನ್ಯಾಯ ಎಂದು ಹೇಳುವವರು ಮಕ್ಕಳಿಗೆ ಅವಕಾಶವನ್ನೇ ಕೊಡದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು ಇನ್ನೊಂದು ಬಾರಿಯೂ ಬರೆಯುವೆ ಎಂದು ತಿಳಿಸಿದರು. ‘10ನೇ ತರಗತಿ ಓದುವ ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ ಎನ್ನುವುದು ಕಳವಳಕಾರಿ. ಶಿಕ್ಷಕರು ತಮ್ಮ ಪವಿತ್ರ ವೃತ್ತಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.