ADVERTISEMENT

ಬಿಜೆಪಿಗೆ ಬಹುಮತ ಇದ್ದರೂ ತೀವ್ರ ಪೈಪೋಟಿ

ಯಲಬುರ್ಗಾ ಪಟ್ಟಣ ಪಂಚಾಯಿತಿ

ಉಮಾಶಂಕರ ಬ.ಹಿರೇಮಠ
Published 11 ಅಕ್ಟೋಬರ್ 2020, 5:34 IST
Last Updated 11 ಅಕ್ಟೋಬರ್ 2020, 5:34 IST
ಯಲಬುರ್ಗಾ ಪಟ್ಟಣ ಪಂಚಾಯಿತಿ ಕಚೇರಿಯ ಒಂದು ನೋಟ
ಯಲಬುರ್ಗಾ ಪಟ್ಟಣ ಪಂಚಾಯಿತಿ ಕಚೇರಿಯ ಒಂದು ನೋಟ   

ಯಲಬುರ್ಗಾ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಿದೆ. ಆಯ್ಕೆಯಾಗಿ ಸುಮಾರು ಒಂದೂವರೆ ವರ್ಷ ಯಾವುದೇ ಅಧಿಕಾರವಿಲ್ಲದೇ ಕಾಲ ಕಳೆಯುತ್ತಿದ್ದ ಸದಸ್ಯರಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಹುಮ್ಮಸ್ಸು ಎದ್ದು ಕಾಣುತ್ತಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಹಾಗೆಯೇ ಎರಡು ಸ್ಥಾನಗಳಿಗೆ ಸಾಕಷ್ಟು ಸಂಖ್ಯೆಯ ಅರ್ಹತೆ ಇರುವುದರಿಂದ ಅನೇಕ ಸದಸ್ಯರು ಕಸರತ್ತು, ಲಾಬಿ ಶುರು ಮಾಡಿದ್ದಾರೆ. ಮುಖಂಡರ ಬಾಗಿಲು ತಟ್ಟುತ್ತಿದ್ದು, ವಿವಿಧ ರೀತಿಯಲ್ಲಿ ಒತ್ತಡ ಹೇರುತ್ತಿರುವುದು ಕಂಡುಬರುತ್ತಿದೆ.

ಒಟ್ಟು 15 ಸ್ಥಾನಗಳ ಸಂಖ್ಯಾ ಬಲದಲ್ಲಿ 11 ಬಿಜೆಪಿ, 3 ಕಾಂಗ್ರೆಸ್ ಹಾಗೂ 1 ಸ್ಥಾನದಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸ್ಪಷ್ಟ ಬಹುಮತವಿದೆ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಕಟ್ಟಾ ಕಾರ್ಯಕರ್ತ ಸಿದ್ಧರಾಮೇಶ ಬೇಲೇರಿ ಈ ಸಲ ಪತ್ನಿ ವಿಜಯಲಕ್ಷ್ಮಿ ಅವರನ್ನು ಹೇಗಾದರೂ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಕೂಡಿಸಲು ಪ್ರಯತ್ನದಲ್ಲಿದ್ದಾರೆ. ಹಾಗೆಯೇ ಅಂದಯ್ಯ ಕಳ್ಳಿಮಠ, ಅಮರೇಶ ಹುಬ್ಬಳ್ಳಿ ಕೂಡಾ ಅವಕಾಶ ಮಾಡಿಕೊಡುವಂತೆ ವರಿಷ್ಠರಲ್ಲಿ ದುಂಬಾಲು ಬಿದ್ದಿರುವ ಬಗ್ಗೆ ಅವರ ಬೆಂಬಲಿಗರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ ವಸಂತಬಾವಿಮನಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕಳಕಪ್ಪ ತಳವಾರ ಈ ಹಿಂದಿನ ಹೆಚ್ಚಿನ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು ಅಧ್ಯಕ್ಷರಾಗಿದ್ದು ತೀರಾ ಕಡಿಮೆ. ಕಾರಣ ಈ ಸಲ ಅವಕಾಶ ಮಾಡಿಕೊಡುವಂತೆ ಮುಖಂಡರಲ್ಲಿ ಆಗ್ರಹಿಸುತ್ತಿರುವುದುತಿಳಿದುಬಂದಿದೆ.

ಉಪಾಧ್ಯಕ್ಷ ಸ್ಥಾನವು ಕೂಡಾ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಇಲ್ಲಿಯೂ ಪೈಪೋಟಿಗೆ ಕೊರತೆಯಿಲ್ಲ. ಕುರುಬ ಸಮಾಜದ ಶ್ರೀದೇವಿ ದೊಡ್ಡಯ್ಯ ಗುರುವಿನ, ಲಿಂಗಾಯತ ಶಾಂತಾ ಮಾಟೂರ, ಪರಿಶಿಷ್ಟ ಜಾತಿಗೆ ಸೇರಿದ ಬಸಮ್ಮ ಬಣಕಾರ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಬಿಜೆಪಿಯಲ್ಲಿ ಹಾಲುಮತ ಸಮಾ ಜದ ಪ್ರಾಬಲ್ಯ ಕಡಿಮೆ ಇರುವುದರಿಂದ ಮುಂದಿನ ಯಾವುದೇ ಚುನಾವಣೆ ಯಲ್ಲಿ ಅವರನ್ನು ಪಕ್ಷದತ್ತ ಗಮನ ಸೆಳೆಯುವಂತೆ ಮಾಡುವ ಉದ್ದೇಶದ ಹಿನ್ನೆಲೆಯಲ್ಲಿ ಮುಖಂಡರು ಶ್ರೀದೇವಿ ಗುರುವಿನ ಅವರ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.