ADVERTISEMENT

ರಾಯರಡ್ಡಿಯಿಂದ ರೈತರಿಗೆ ಸುಳ್ಳು ಭರವಸೆ: ಹಾಲಪ್ಪ ಆಚಾರ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 6:38 IST
Last Updated 23 ಏಪ್ರಿಲ್ 2023, 6:38 IST
ಕುಕನೂರು ತಾಲ್ಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು
ಕುಕನೂರು ತಾಲ್ಲೂಕಿನ ಕದ್ರಳ್ಳಿ ಗ್ರಾಮದಲ್ಲಿ ಶನಿವಾರ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು   

ಕುಕನೂರು: ಐದು ವರ್ಷದ ಅವಧಿಯಲ್ಲಿ ಮಾಡಿದ ಕೆರೆಗಳ ಜೀರ್ಣೋದ್ಧಾರ, ಗ್ರಾಮೀಣ ಪ್ರದೇಶಗಳ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿ ನಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳುತ್ತಾ ದಾರಿತಪ್ಪಿಸುತ್ತಿರುವ ರಾಯರಡ್ಡಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ತಾಲ್ಲೂಕಿನ ಹೊನ್ನುಣಿಸಿ, ಚಿಕ್ಕ ಬೀಡೇನಾಳ, ಕದ್ರಳ್ಳಿ, ಹಿರೇಬೀಡನಾಳ, ಮುತ್ತಾಳ, ಅರಿಕೇರಿ, ಚಂಡೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಯರಡ್ಡಿ ಅವರು 20 ವರ್ಷ ಶಾಸಕರಾಗಿ ರೈತರ ಕುರಿತು ಕಾಳಜಿಯಿಲ್ಲದೆ, ಸಿಂಗಾಪುರ್ ಮತ್ತು ದುಬೈ ಮಾಡುತ್ತೇನೆಂದು ಹೇಳಿ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ನಾನೇನಾದರೂ 30 ವರ್ಷಗಳ ಹಿಂದೆಯೇ ಶಾಸಕನಾಗಿದ್ದರೆ, ಕ್ಷೇತ್ರವನ್ನೇ ನೀರಾವರಿ ಮಾಡುತ್ತಿದ್ದೆ ಎಂದು ಹೇಳಿದರು.

ADVERTISEMENT

ಪಕ್ಷದ ಮುಖಂಡ ಸಿ.ಎಚ್. ಪೊಲೀಸ್ ಪಾಟೀಲ ಮಾತನಾಡಿ, ಜನರ ನಡುವೆ ಸಾಮಾನ್ಯ ವ್ಯಕ್ತಿಯಾಗಿ, ಮಕ್ಕಳ ನಡುವೆ ಮಗುವಿನಂತಾಗಿ, ರಾಜಕೀಯ ಧುರೀಣರ ನಡುವೆ ಜನನಾಯಕರಾಗಿ ಎಲ್ಲರೊಂದಿಗೂ ಬೆರೆಯುವ ಹಾಗೂ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಸ್ನೇಹಪೂರ್ಣ ವ್ಯಕ್ತಿತ್ವದ ಹಾಲಪ್ಪ ಆಚಾರ ಅವರಿಗೆ ಅವರನ್ನ ಈ ಕ್ಷೇತ್ರದ ಶಾಸಕನಾಗಿ ಮಾಡಿ ಎಂದು ಜನರಲ್ಲಿ ಮನವಿ ಮಾಡಿದರು.

‌ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ ಮಾತನಾಡಿ, ಪಾಲಿನ ಆಶಾಕಿರಣ, ರೈತಪರ ಹೋರಾಟಗಾರ, ದೀನದಲಿತರ ಬಂಧುವಾಗಿ, ನೀರಾವರಿ ಹೋರಾಟಗಾರರಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರು ಮಾಡಿದ ಸಮಾಜಮುಖಿ ಕಾರ್ಯಗಳು ಅನನ್ಯ. ಅಧಿಕಾರ ಇರಲಿ, ಇಲ್ಲದೇ ಇರಲಿ ಜನಸಾಮಾನ್ಯರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಅವರ ಕಷ್ಟಗಳಿಗೆ ಪರಿಹಾರ ನೀಡಿದ್ದಾರೆ ಎಂದರು.

ರಾಜಕೀಯ ಸಾಧನೆಗಳು ಹಾಗೂ ಸಹಕಾರಿ ಸಂಘದ ರಾಜ್ಯಾಧ್ಯಕ್ಷರಾಗಿ ಹಾಗೂ ವಿಧಾನ ಪರಿಷತ್‌ ಸದಸ್ಯರಾಗಿ 2018ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ, ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸಚಿವರಾಗಿ ಸಮಾಜಮುಖಿ ಕಾರ್ಯವನ್ನು ಮಾಡಿದ್ದಾರೆ ಎಂದರು.

ಬಸನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ಕೊಟ್ರಪ್ಪ ಮುತ್ತಾಳ, ವಿಶ್ವನಾಥ್ ಮರಿಬಸಪ್ಪನವರ, ಶರಣಪ್ಪ ಮಂಡಲಗಿರಿ, ಶಂಕ್ರಪ್ಪ ಸುರಪುರ, ಅಯ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.