ಕಾರಟಗಿ: ಒಂದೆಡೆ ಬೀದಿ ದೀಪಗಳು ಉರಿಯದೇ ಕಾರ್ಗತ್ತಲು. ಇನ್ನೊಂದೆಡೆ ಹಗಲಿನಲ್ಲಿಯೂ ಉರಿಯುವ ಬೀದಿ ದೀಪಗಳು. ಇಂಥಹ ಸ್ಥಿತಿ ಪಟ್ಟಣದಲ್ಲಿರುವುದು ನಿನ್ನೆ, ಮೊನ್ನೆಯದಲ್ಲ ಹಲವು ವರ್ಷಗಳಿಂದಲೂ ಇದು ನಿರಂತರವಾಗಿಯೇ ಇದೆ. ಇದು ಪಟ್ಟಣದ ಪುರಸಭೆಯ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಜನರು ಆರೋಪಿಸಿದ್ದಾರೆ.
ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲೂ ಸದಸ್ಯರು ಈ ವಿಷಯ ಪ್ರಸ್ತಾಪಿಸಿದ್ದರು.
‘ವಿದ್ಯುತ್ ಉಳಿಸಿರಿ’ ಎಂಬ ಜಾಗೃತಿ ಮೂಡಿಸುವ ಘೋಷಣೆಗಳು ಬರೀ ಕಾಗದಕ್ಕೆ ಮಾತ್ರ ಸೀಮಿತ ಎಂಬುದು ನಾಗರಿಕರ ಆಪಾದನೆ.
ಪಟ್ಟಣದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಿದ್ದ ಪುರಸಭೆ ಕಚೇರಿಯ ಮುಂಭಾಗದ ರಾಜ್ಯ ಹೆದ್ದಾರಿಯ ಎಡ, ಬಲ ಭಾಗದಲ್ಲಿರುವ ವಿದ್ಯುತ್ ಕಂಬಗಳಲ್ಲಿ ಕೆಲವನ್ನು ಬಿಟ್ಟರೆ ಉಳಿದ ಕಂಬಗಳಲ್ಲಿ ಬಲ್ಬ್‌ಗಳಿರದೇ ಕತ್ತಲು ಆವಸಿರುವುದನ್ನು ರಾತ್ರಿ ಸಮಯದಲ್ಲಿ ನೋಡಬಹುದು. ಪುರಸಭೆ ಕಚೇರಿಯಿಂದ ವಿಶೇಷ ಎಪಿಎಂಸಿವರೆಗೆ ಹಗಲು, ರಾತ್ರಿ ಜನ, ವಾಹನ ದಟ್ಟಣೆ ಅಧಿಕವಿರುತ್ತದೆ. ಕತ್ತಲೆಯ ಕಾರಣದಿಂದ ಬೈಕ್ ಸವಾರರು ಆಯತಪ್ಪಿ ಬೀಳುವುದು, ಡಿಕ್ಕಿ ಹೊಡೆದು ಗಾಯಗೊಳ್ಳುವುದು ಇಲ್ಲಿ ಸಾಮಾನ್ಯವೆನ್ನುವಂತಿದೆ. ಈಚೆಗೆ ಪುರಸಭೆ ಬಳಿ ಅಪಘಾತಕ್ಕೊಳಗಾದ ಬೈಕ್ ಸವಾರ ಕತ್ತಲಲ್ಲಿ ಏನೂ ಕಾಣದೇ ಡಿಕ್ಕಿ ಹೊಡೆದು ಗಾಯಗೊಂಡೆ ಎಂದು ಹೇಳಿದ್ದರು. ಇದನ್ನು ಗಮನಿಸಿದರೆ ಕಾರ್ಗತ್ತಲೆಯಿಂದಾಗುವ ಅವಘಡಗಳು ಇಲ್ಲಿ ಸಹಜವೆನ್ನುವಂತಿದೆ.
ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಬಲ್ಬ್‌ಗಳು ಇರದೇ ಇರುವುದು ಕಳ್ಳರಿಗೆ ವರದಾನವಾಗಿದೆ. ಮಾಧ್ಯಮಗಳು ಗಮನ ಸೆಳೆದರೂ, ನಾಗರಿಕರು ಆಗ್ರಹಿಸಿದರೂ ಪುರಸಭೆ ಮಾತ್ರ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಾತ್ರಿಯಾದರೆ ಮುಖ್ಯ ರಸ್ತೆಯೇ ಕತ್ತಲಲ್ಲಿರುವುದು ಕಳ್ಳತನದ ಕೃತ್ಯ ನಡೆಯುವುದಕ್ಕೆ ಸಹಕಾರಿಯಾಗಿದೆ ಎನ್ನುತ್ತಾರೆ ಸೆಕ್ಯೂರಿಟಿ ಗಾರ್ಡ್ ಒಬ್ಬರು.
ಮುಖ್ಯರಸ್ತೆಯ ಕಥೆಯೇ ಹೀಗಿದ್ದರೆ, ಓಣಿಗಳ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಪುರಸಭೆ ಇನ್ನಾದರೂ ಬೆಳಕು ನೀಡುವುದು ತನ್ನ ಪ್ರಥಮಾದ್ಯತೆಯ ಕೆಲಸ ಎಂದು ಅರಿಯ ಬೇಕು ಎಂಬುದು ಜನರ ಒತ್ತಾಯ.
ಪುರಸಭೆಯ ಮುಂಭಾಗದ ರಸ್ತೆಯ ಕಂಬಗಳಲ್ಲಿ ಬಲ್ಬ್‌ಗಳಿರದಿರುವುದು ದುರದೃಷ್ಟಕರ. ಮುಖ್ಯರಸ್ತೆಯ ಬಳಿ ಇರುವ ವ್ಯಾಪಾರಿಗಳು ಬಲ್ಪ್ ಹಾಕಿದ್ದರೆ ಮಾತ್ರ ರಸ್ತೆಯಲ್ಲಿ ಬೆಳಕು. ಇಲ್ಲದಿದ್ದರೆ ‘ಕಾರ್ಗತ್ತಲೆಯಲ್ಲಿ ಕಾರಟಗಿ’ ಎಂಬಂತಿರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚತ್ತುಕೊಳ್ಳಬೇಕಿದೆ. ಮಲ್ಲಪ್ಪ ಎಚ್. ಸ್ಥಳೀಯ ನಿವಾಸಿ ರಸ್ತೆಯ ಪಕ್ಕದಲ್ಲಿ ಹೊಸದಾಗಿ ಕಂಬಗಳನ್ನು ಹಾಕಿದ್ದು ಇನ್ನೂ ನಮಗೆ ಹಸ್ತಾಂತರವಾಗಿಲ್ಲ. ಆದರೂ ಎಲ್ಲಾ ಕಂಬಗಳಿಗೆ ಬಲ್ಪ್ ಹಾಕಿ ಜನರಿಗೆ ಬೆಳಕಿನ ಅನುಕೂಲ ಕಲ್ಪಿಸಲಾಗುವುದು. ಈ ಬಗ್ಗೆ ಜನರೂ ದೂರುತ್ತಿದ್ದಾರೆ. ಹಗಲಲ್ಲೂ ಬೆಳಗುವ ದೀಪಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ರೇಖಾ ರಾಜಶೇಖರ ಆನೇಹೊಸೂರು ಅಧ್ಯಕ್ಷೆ, ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.