ADVERTISEMENT

ಕೊಪ್ಪಳ: ತಾಯಿ ಸಾವು ಕಲಿಸಿದ ಪರಿಸರ ಪಾಠ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಿದಿರಿನ ಉತ್ಪನ್ನಗಳ ಮಾರಾಟದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:36 IST
Last Updated 4 ಜೂನ್ 2023, 23:36 IST
ಪ್ರಕಾಶ ಮೇದಾರ
ಪ್ರಕಾಶ ಮೇದಾರ   

ಪ್ರಮೋದ

ಕೊಪ್ಪಳ: ಮೇದಾರ ಸಮುದಾಯದ ಜನ ಬಿದಿರಿನಿಂದ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದು ಸಾಮಾನ್ಯ. ಆದರೆ, ಕೊಪ್ಪಳದ ಪ್ರಕಾಶ ಮೇದಾರ ಎಂಬುವರು ತಮ್ಮ ತಾಯಿಯ ಸಾವು ಕಲಿಸಿದ ಪಾಠದಿಂದಾಗಿ ಈ ಉತ್ಪನ್ನಗಳ ಮಾರಾಟದ ಜೊತೆಗೆ ಪ್ಲಾಸ್ಟಿಕ್‌ ಬಳಕೆಯ ಅಪಾಯದ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.

ಸೋಮವಾರ (ಇಂದು) ವಿಶ್ವ ಪರಿಸರ ದಿನ. ‘ಪ್ಲಾಸ್ಟಿಕ್‌ ಮಾಲಿನ್ಯವನ್ನು ಸೋಲಿಸಿ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ. ಇದಕ್ಕೆ ಪೂರಕವಾಗಿ ಪ್ರಕಾಶ ಕಳೆದ ಹತ್ತು ವರ್ಷಗಳ ಹಿಂದೆಯೇ ಪ್ಲಾಸ್ಟಿಕ್‌ ಬಳಕೆ ಅಪಾಯ ಮತ್ತು ಪರ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 13 ವರ್ಷಗಳ ಹಿಂದೆ ಅವರ ಮನೆಯಲ್ಲಿ ಸಾಕಷ್ಟು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡುತ್ತಿದ್ದುದರ ಪರಿಣಾಮ ಅವರ ತಾಯಿಯ ಆರೋಗ್ಯದ ಮೇಲಾಯಿತು. ಪದೇ ಪದೇ ಅನಾರೋಗ್ಯಕ್ಕೂ ಒಳಗಾದರು. ವೈದ್ಯರ ಬಳಿ ಹೋದಾಗ ರಕ್ತ ಕ್ಯಾನ್ಸರ್‌ ಅಗಿರುವುದು ದೃಢವಾಗಿ ಮೃತಪಟ್ಟರು.

ADVERTISEMENT

ಹೀಗಾಗಿ ಪ್ರಕಾಶ ಆಗಿನಿಂದ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿದರು. ಈಗ ಮನೆಯಲ್ಲಿ ಬಿದಿರಿನ ಹಾಗೂ ಮಣ್ಣಿನ ಸಾಮಗ್ರಿಗಳೇ ಹೆಚ್ಚು. ಬಿದಿರಿನಿಂದ ತಯಾರಿಸಿದ ಮೊಬೈಲ್‌ ಫೋನ್‌ ಸ್ಟ್ಯಾಂಡ್, ಲೈಟ್ ಲ್ಯಾಂಪ್‌, ಹೂವಿನ ಬೊಕೆ, ಬಳೆ ಸ್ಟ್ಯಾಂಡ್‌, ಪೆನ್‌ ಸ್ಟ್ಯಾಂಡ್‌, ತರಕಾರಿ ಬುಟ್ಟಿಗಳು, ಟಿಶ್ಯು ಪೇಪರ್‌ ಸ್ಟ್ಯಾಂಡ್‌, ಮರ, ಬೀಸಣಿಕೆ ಹೀಗೆ ಬಿದರಿನಲ್ಲಿ ಹೆಚ್ಚು ಗೃಹಬಳಕೆ ವಸ್ತುಗಳನ್ನು ತಯಾರಿಸಿದರು. ಕರಕುಶಲ ನಿಗಮದ ನೆರವಿನಿಂದ ತರಬೇತಿ ಪಡೆದಿದ್ದು, ಈಗ ಊರೂರು ಅಲೆದಾಡಿ ತಮ್ಮ ಸಮಾಜದ ಜನರಿಗೆ ಗೃಹಬಳಕೆ ವಸ್ತುಗಳ ತಯಾರಿಕೆ ಕಲಿಸಿಕೊಡುತ್ತಿದ್ದಾರೆ.

ಪ್ಲಾಸ್ಟಿಕ್‌ ಬಳಕೆ ಬದುಕಿಗೆ ಹೇಗೆ ಅಪಾಯವಾಗಬಲ್ಲದು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬಿದಿರು ಮತ್ತು ಮಣ್ಣಿನ ಉತ್ಪನ್ನಗಳನ್ನು ಬಳಸಿ ಸಾಂಪ್ರದಾಯಿಕ ಜೀವನ ಶೈಲಿ ರೂಢಿಸಿಕೊಂಡರೆ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಗ್ರಾಹಕರಿಗೆ ತಿಳಿಸುತ್ತಿದ್ದಾರೆ.

‘ಬಿದಿರಿನ ಉತ್ಪನ್ನಗಳು ಮನೆಯ ಅಂದಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಅಗತ್ಯ. ಅತಿಯಾದ ಪ್ಲಾಸ್ಟಿಕ್‌ ಬಳಕೆ ಜೀವಕ್ಕೆ ಎರವಾಗುತ್ತಿದೆ. ಆದ್ದರಿಂದ ಅಲಂಕಾರಿಕತೆಗೆ ಸೀಮಿತವಾಗಿದ್ದ ಬಿದಿರು ಬಳಿಸಿ ಮನೆ ಬಳಕೆಗೆ ಬೇಕಾಗುವ ಸಾಮಾಗ್ರಿಗಳ ತಯಾರಿಕೆಗೆ ಆದ್ಯತೆ ಕೊಡಲಾಗುತ್ತಿದೆ. ಕೈ ತುಂಬಾ ಕೆಲಸ, ಉತ್ತಮ ಸಂಪಾದನೆಯಿದೆ. ಇವುಗಳನ್ನು ಖರೀದಿಸಿದರೆ ಜನರ ಆರೋಗ್ಯವೂ ಉಳಿಯುತ್ತದೆ’ ಎಂದು 30 ವರ್ಷದ ಪ್ರಕಾಶ ಹೇಳುತ್ತಾರೆ.

ಬಿದಿರಿನಿಂದ ತಯಾರಿಸಿದ ಉತ್ಪನ್ನಗಳ ಜೊತೆ ಪ್ರಕಾಶ ಮೇದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.