ADVERTISEMENT

ಕುಷ್ಟಗಿ: ಕೃಷ್ಣೆ ಉಕ್ಕಿದರೂ ಕುಷ್ಟಗಿಗೆ ನೀರಿಲ್ಲ

ಕುಂಟುತ್ತಾ ಸಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆ

ನಾರಾಯಣರಾವ ಕುಲಕರ್ಣಿ
Published 30 ಜೂನ್ 2025, 5:58 IST
Last Updated 30 ಜೂನ್ 2025, 5:58 IST
ಕುಷ್ಟಗಿ ತಾಲ್ಲೂಕು ಶಾಖಾಪುರ ಕೆರೆ ಮಳೆಗಾಲದಲ್ಲೂ ಒಣಗಿರುವುದು
ಕುಷ್ಟಗಿ ತಾಲ್ಲೂಕು ಶಾಖಾಪುರ ಕೆರೆ ಮಳೆಗಾಲದಲ್ಲೂ ಒಣಗಿರುವುದು   

ಕುಷ್ಟಗಿ: ಅಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ, ಆಲಮಟ್ಟಿ ಜಲಾಶಯದ ಭೋರ್ಗರೆತ. ಆದರೆ, ಇಲ್ಲಿ ಮಳೆಯ ಸುಳಿವಿಲ್ಲದೆ ಕೆರೆಗಳು ಒಣಗಿವೆ. ನೀರಿಗಾಗಿ ಜಾನುವಾರು ಪರಿತಪಿಸುತ್ತಿವೆ. ಬೆಳೆಗಳೆಲ್ಲಾ ಬಾಡುತ್ತಿರುವ ದೃಶ್ಯ ಇಲ್ಲಿ ಕಣ್ಣಿಗೆ ರಾಚುತ್ತಿದೆ.

ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಆಲಮಟ್ಟಿ ಜಲಾಶಯದಿಂದ ಈ ಭಾಗದ ಕೆರೆಗಳನ್ನು ತುಂಬಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆದಿದ್ದರೆ ಕನಿಷ್ಟ ಪ್ರಮಾಣದಲ್ಲಾದರೂ ರೈತರ ನೆರವಿಗೆ ಬಂದಂತಾಗುತ್ತಿತ್ತು. ಆದರೆ, ಜಿಲ್ಲೆ ಜನಪ್ರತಿನಿಧಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಜನ ಬರದ ಕರಿನೆರಳಿನಲ್ಲೇ ಬದುಕುವಂತಾಗಿದೆ.

ಮಹಾರಾಷ್ಟ್ರ, ಸಹ್ಯಾದ್ರಿ ಶ್ರೇಣಿಯಲ್ಲಿ ಹೆಚ್ಚು ಮಳೆಯಾದರೆ ಕೃಷ್ಣಾ ನದಿ ಉಕ್ಕುತ್ತದೆ. ವಿಪರ್ಯಾಸ ಎಂದರೆ, ಈ ಭಾಗದಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುವ ಸ್ಥಿತಿ ಅನೇಕ ವರ್ಷಗಳಿಂದಲೂ ಸಾಮಾನ್ಯವಾಗಿದೆ.

ADVERTISEMENT

ಇಂಥ ಸಂಕಷ್ಟದ ಸಂದರ್ಭ ಹೆಚ್ಚುವರಿ ನೀರನ್ನು ಕಷ್ಟಕಾಲದಲ್ಲಿ ಜಿಲ್ಲೆಯ ಒಣ ಪ್ರದೇಶಕ್ಕೆ ಹರಿಸುವ ಉದ್ದೇಶದಿಂದಲೇ ಕೊಪ್ಪಳ ಏತ ನೀರಾವರಿ ಯೋಜನೆಯ ಭಾಗವಾಗಿ ಕೆರೆ ತುಂಬಿಸುವ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ ವರ್ಷ ಮಳೆ ಇಲ್ಲದ ಸಂದರ್ಭ ಕುಷ್ಟಗಿ, ಯಲಬುರ್ಗಾ ತಾಲ್ಲೂಕುಗಳ ಬಹುತೇಕ ಕೆರೆಗಳು ಕೃಷ್ಣಾ ನೀರಿನಿಂದ ಭರ್ತಿಯಾಗಿದ್ದವು. ಆದರೆ, ಈಗ ಮಳೆ ಇಲ್ಲ, ಅತ್ತ ನದಿಗೆ ಪ್ರವಾಹ ಬಂದರೂ ಕೊಪ್ಪಳ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಕಳಕಳಿ ಅಧಿಕಾರಸ್ಥರಲ್ಲಿ ಎದ್ದು ಕಾಣುತ್ತಿಲ್ಲ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ.

ಎಷ್ಟಿವೆ ಕೆರೆಗಳು: ಆಲಮಟ್ಟಿ ಜಲಾಶಯದಿಂದ ನೀರು ತುಂಬಿಸಲು ಯೋಜನೆ ರೂಪಿಸಲಾಗಿದ್ದು ತಾಲ್ಲೂಕಿನ ಕಲಾಲಬಂಡಿ ಶಾಖೆಯ 7 ಮತ್ತು ಇಳಕಲ್‌ ಶಾಖೆಯ 11 ಕೆರೆಗಳಿಗೆ ಕೊಳವೆಗಳ ಮೂಲಕ ನೀರು ಹರಿಸಲಾಗುತ್ತದೆ.

ಯಲಬುರ್ಗಾ ತಾಲ್ಲೂಕಿನ ಕೆರೆಗಳಿಗೂ ನೀರು ತುಂಬಿಸುವುದು ಯೋಜನೆಯಲ್ಲಿದೆ. ಮಳೆ ಇಲ್ಲದ ಕಾರಣ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು ಕೆರೆಗಳಿಗೆ ನೀರು ಬಂದಿದ್ದರೆ ಕೊಳವೆ ಬಾವಿಗಳಲ್ಲಿ ಒಂದಷ್ಟು ಜೀವಜಲ ಜಿನುಗುತ್ತಿತ್ತು. ಆದರೆ, ನಿಡಶೇಸಿ ಕೆರೆ ಹೊರತುಪಡಿಸಿ ಉಳಿದ ಕೆರೆಗಳು ಬತ್ತಿಹೋಗಿವೆ ಎಂಬ ಆರೋಪ ಇಲ್ಲಿನ ಜನರದ್ದು, ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಕೆಬಿಜೆಎನ್‌ಎಲ್‌ ಇಳಕಲ್‌ ಶಾಖೆ ಎಇಇ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ನೀರು ಬಂದಾಗ ನಿರ್ವಹಣೆ: ಇಳಕಲ್‌ ಬಳಿಯ ಜಾಕ್‌ವೆಲ್‌ ಮತ್ತು ಕಲಾಲಬಂಡಿ ಶಾಖೆಗಳ ಜಲಸಂಗ್ರಹಾಗಾರಗಳ ಯಂತ್ರಗಳು ಪದೇಪದೇ ದುರಸ್ತಿಗೆ ಬರುವುದು, ಕೊಳವೆಗಳು ಒಡೆಯುವುದು ಸಾಮಾನ್ಯ ಸಂಗತಿಯಾಗಿದೆ. ಕಳೆದ ವರ್ಷ ದುರಸ್ತಿ ಸಲುವಾಗಿಯೇ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿತ್ತು.

‘ನೀರು ಬರುವ ಮೊದಲೇ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸದ ಕೆಬಿಜೆಎನ್‌ಎಲ್‌ ಎಂಜಿನಿಯರ್‌ಗಳು ಕೆರೆಗಳಿಗೆ ನೀರು ಬಿಡುವ ಸಂದರ್ಭದಲ್ಲಿ ನಿರ್ವಹಣೆಗೆ ಮುಂದಾಗುತ್ತಾರೆ. ಈ ರೀತಿಯಾದರೆ ಕೆರೆಗಳಿಗೆ ನೀರು ಬರುವುದು ನಿಂತುಹೋಗುತ್ತದೆ. ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿದರೂ ಕೆರೆ ತುಂಬಿಸುವ ಯೋಜನೆಯ ಫಲ ಜನರಿಗೆ ತಲುಪದಂತಾಗಿದೆ’ ಎಂದು ರೈತರಾದ ಯಮನೂರಪ್ಪ ತುಮ್ಮರಗುದ್ದಿ, ಸಂಗನಗೌಡ ಅಗಸಿ ಮುಂದಿನ ಅತೃಪ್ತಿ ಹೊರಹಾಕಿದರು.

ಶಾಖಾಪುರ ಕೆರೆಯಲ್ಲಿ ಕೆಬಿಜೆಎನ್‌ಎಲ್‌ ವಾಲ್ವ್‌ ಮುರಿದು ಹಾಳಾಗಿರುವುದು
ಆಲಮಟ್ಟಿಯಲ್ಲಿ ಜುಲೈ1 ರಂದು ಐಸಿಸಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಒಂದು ವಾರದ ಅವಧಿಯಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ದೊರೆಯಲಿದೆ.
– ರಮೇಶ, ಎಇಇ ಕೆಬಿಜೆಎನ್‌ಎಲ್‌ ಕಲಾಲಬಂಡಿ ಶಾಖೆ.
ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ವಿಷಯದಲ್ಲಿ ನಾನು ಪ್ರಯತ್ನ ನಡೆಸಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ.
– ದೊಡ್ಡನಗೌಡ ಪಾಟೀಲ, ಶಾಸಕ

ಆಟದ ಮೈದಾನದಂತಿರುವ ಶಾಖಾಪುರ ಕೆರೆ

ತಾಲ್ಲೂಕಿನ ಶಾಖಾಪುರದ ಕಾಯ್ದಿಟ್ಟ ಅರಣ್ಯ ಇಲಾಖೆಗೆ ಸೇರಿದ ಜಾಗದ ಕೆರೆ ಆಟದ ಅಂಗಳದಂತಿದೆ. ಅಷ್ಟೇ ಅಲ್ಲ ಅದರಲ್ಲಿ ಮುಳ್ಳುಕಂಟಿಗಳು ನೀಲಗಿರಿ ಗಿಡಗಳು ಮಾತ್ರ ಬೆಳೆದಿವೆ. ಹಾಗಾಗಿ ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಯಲ್ಲಿದ್ದರೂ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗದೆ ಪ್ರಯೋಜನ ಇಲ್ಲದಂತಾಗಿದೆ ಎಂದು ಅಲ್ಲಿಯ ರೈತರು ಹೇಳಿದರು.

‘ಕೆರೆ ಅಭಿವೃದ್ಧಿಪಡಿಸಿದರೆ ವರ್ಷಪೂರ್ತಿ ನೀರು ನಿಲ್ಲುತ್ತದೆ ಅಂತರ್ಜಲ ಹೆಚ್ಚುತ್ತದೆ. ಆದರೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ ತಮ್ಮ ಇಲಾಖೆಯಿಂದಲಾದರೂ ಅಭಿವೃದ್ಧಿಪಡಿಸುತ್ತಿಲ್ಲ. ಈ ವಿಷಯವನ್ನು ಶಾಸಕರು ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಜನರ ಕೂಗು ಅರಣ್ಯರೋದನವಾಗಿದೆ’ ಎಂದು ಶಾಖಾಪುರ ನಿವಾಸಿ ಕೊರಡಕೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾನಪ್ಪ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.