ADVERTISEMENT

ಕುಷ್ಟಗಿ: ಸರ್ಕಾರಿ ಜಾಗ ಕಬಳಿಕೆಗೆ ಪಟ್ಟಭದ್ರರ ಹುನ್ನಾರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:02 IST
Last Updated 1 ನವೆಂಬರ್ 2025, 7:02 IST
ಕುಷ್ಟಗಿಯ ದೇಸಾಯಿ ಬಡಾವಣೆಯಲ್ಲಿನ ಮಾಜಿ ಸೈನಿಕರ ಸಂಘದ ನಿವೇಶನದ ಬಳಿಯ ಸರ್ಕಾರಿ ಜಾಗದಲ್ಲಿ ಕೆಲ ವ್ಯಕ್ತಿಗಳು ಗರಸು ಮಣ್ಣು ಗುಡ್ಡೆ ಹಾಕಿರುವುದು
ಕುಷ್ಟಗಿಯ ದೇಸಾಯಿ ಬಡಾವಣೆಯಲ್ಲಿನ ಮಾಜಿ ಸೈನಿಕರ ಸಂಘದ ನಿವೇಶನದ ಬಳಿಯ ಸರ್ಕಾರಿ ಜಾಗದಲ್ಲಿ ಕೆಲ ವ್ಯಕ್ತಿಗಳು ಗರಸು ಮಣ್ಣು ಗುಡ್ಡೆ ಹಾಕಿರುವುದು   

ಕುಷ್ಟಗಿ: ಪಟ್ಟಣದ ಗಜೇಂದ್ರಗಡ ರಸ್ತೆಯ ದೇಸಾಯಿ ಬಡಾವಣೆಯಲ್ಲಿರುವ ಮಾಜಿ ಸೈನಿಕರ ಸಂಘದ ನಿವೇಶನದ ಮುಂದಿನ ಸರ್ಕಾರಿ ಜಾಗವನ್ನು ಕೆಲ ವ್ಯಕ್ತಿಗಳು ಕಬಳಿಸಲು ಮುಂದಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸೈನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಉಪ ಲೋಕಾಯುಕ್ತರು ಮತ್ತು ಇಲ್ಲಿಯ ಪುರಸಭೆ, ಪೊಲೀಸರಿಗೂ ದೂರು ಸಲ್ಲಿಸಿದ್ದಾರೆ. ಈ ಕಾರಣಕ್ಕೆ ಪರಿಶೀಲನೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪುರಸಭೆ ಸಿಬ್ಬಂದಿಯೊಂದಿಗೆ ಕೆಲವರು ವಾಗ್ವಾದಕ್ಕಿಳಿದಿದ್ದರು ಎಂದು ಮೂಲಗಳು ತಿಳಿಸಿವೆ.

ಆಗಿದ್ದೇನು?: ನಿವೃತ್ತ ಸೈನಿಕರ ಸಂಘಕ್ಕೆ ತನ್ನದೇ ಆದ ಚಟುವಟಿಕೆ, ಕಾರ್ಯಕ್ರಮ ನಡೆಸುವುದಕ್ಕೆ ಸ್ವಂತ ಜಾಗ ಇಲ್ಲ. ಈ ಕಾರಣಕ್ಕೆ ನಿವೇಶನ ಒದಗಿಸುವಂತೆ ದಶಕದ ಹಿಂದೆಯೇ ಪುರಸಭೆಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಅಲ್ಲದೆ, ದೇಸಾಯಿ ಬಡಾವಣೆಯಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ನಿವೇಶನ ಕೊಡುವುದಾಗಿ ಪುರಸಭೆಯ ಆಗಿನ ಅಧ್ಯಕ್ಷ ಮೌಖಿಕ ಸಮ್ಮತಿ ನೀಡಿದ್ದರಿಂದ ಕೆಲ ವರ್ಷಗಳ ಹಿಂದೆಯೇ ಸದರಿ ಸ್ಥಳದಲ್ಲಿ ಮಾಜಿ ಸೈನಿಕರ ಸಂಘದ ನಿವೇಶನ ಎಂಬ ಫಲಕ ಅಳಡಿಸಲಾಗಿದೆ. ಆದರೆ, ಇಲ್ಲಿಯವರೆಗೂ ಅಲೆದಾಡುತ್ತ ಬಂದರೂ ಪುರಸಭೆ ಠರಾವು ಅಂಗೀಕರಿಸಿ ಸದರಿ ಜಾಗವನ್ನು ಸಂಘಕ್ಕೆ ಅಧಿಕೃತವಾಗಿ ವಹಿಸಿಕೊಟ್ಟಿಲ್ಲ ಎಂದು ದೂರಲಾಗಿದೆ.

ADVERTISEMENT

ಈ ಮಧ್ಯೆ ನಿವೇಶನದ ಮುಂದಿನ ಜಾಗ ರಸ್ತೆಗೆ ಮೀಸಲಾಗಿದ್ದು, ಲೋಕೋಪಯೋಗಿ ಇಲಾಖೆಗೆ ಸೇರಿದೆ. ಮಾಜಿ ಸೈನಿಕರ ಸಂಘವು ನಿವೇಶನದ ದಾಖಲೆಗಳು ಲಭ್ಯವಾದ ಬಳಿಕ ಕಟ್ಟಡ ನಿರ್ಮಾಣದ ಉದ್ದೇಶ ಹೊಂದಿದೆ. ಆದರೆ, ನಿವೇಶನದ ಮುಂದಿನ ಜಾಗವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳಲು ಮುಂದಾಗಿರುವ ಕೆಲ ಪಟ್ಟಭದ್ರ ವ್ಯಕ್ತಿಗಳು ಅದರಲ್ಲಿ ಗರಸು ಮಣ್ಣು ಹಾಕಿದ್ದು, ಸಮತಟ್ಟು ಮಾಡಿ ಶೆಡ್‌ಗಳನ್ನು ನಿರ್ಮಿಸಿ ಸರ್ಕಾರಿ ಜಾಗವನ್ನೇ ಬೇರೆಯವರಿಗೆ ವಾಣಿಜ್ಯ ಉದ್ದೇಶಕ್ಕೆ ಅನಧಿಕೃತವಾಗಿ ಬಾಡಿಗೆ ನೀಡುವ ದುರಾಲೋಚನೆ ಹೊಂದಿದ್ದಾರೆ ಎಂದು ಸೈನಿಕರ ಸಂಘ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಶಂಕರಪ್ಪ ಕವಡಿಕಾಯಿ, ಸದಸ್ಯರಾದ ಶಂಕರಪ್ಪ ಗಾದಾರಿ, ಭೀಮಪ್ಪ ಮ್ಯಾಗೇರಿ, ಕಳಕಪ್ಪ ನಾಯಕವಾಡಿ ಹಾಗೂ ಇತರರು ಇದ್ದರು.

ತಮ್ಮದಲ್ಲದ ಮತ್ತು ಸರ್ಕಾರಕ್ಕೆ ಸೇರಿದ ರಸ್ತೆ ಬದಿಯ ಜಾಗವನ್ನು ವಿವಿಧ ಸಂಘಟನೆಗಳು, ಜಾತಿ ಆಧಾರದ ಮೇಲೆ ಕಬಳಿಸುತ್ತಿರುವ ಪ್ರವೃತ್ತಿ ಪಟ್ಟಣದಲ್ಲಿ ಹೆಚ್ಚುತ್ತಿದ್ದು, ರಸ್ತೆ ಅಕ್ಕಪಕ್ಕದ ಜಾಗವನ್ನು ಅತಿಕ್ರಮಿಸಿ ಬಾಡಿಗೆ ನೀಡಲಾಗುತ್ತಿದೆ. ಈ ವಿಷಯ ಗಮನಕ್ಕೆ ಬಂದರೂ ಅಂಗಡಿಯವರಿಂದ ಕರ ವಸೂಲಿ ಮಾಡುವ ಪುರಸಭೆಯವರು ಸರ್ಕಾರಿ ಜಾಗವನ್ನು ಬಾಡಿಗೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ರಸ್ತೆ ಪಕ್ಕದ ಜಾಗ ತೆರವಿಗೂ ಮುಂದಾಗದೆ ಪಟ್ಟಭದ್ರರೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.