ADVERTISEMENT

ಕಾರ್ಖಾನೆಗಳ ವಿಸ್ತರಣೆಗೆ ವಿರೋಧ: ದೃಢ ನಿರ್ಧಾರ ತಾಳಲು ಗವಿಶ್ರೀಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:41 IST
Last Updated 8 ನವೆಂಬರ್ 2025, 5:41 IST
ಪತ್ರದ ಪ್ರತಿ
ಪತ್ರದ ಪ್ರತಿ   

ಕೊಪ್ಪಳ: ‘ಬಲ್ಡೋಟಾ (ಎಂಎಸ್‌ಪಿಎಲ್‌),  ಕಲ್ಯಾಣಿ,  ಕಿರ್ಲೋಸ್ಕರ್, ಮುಕುಂದ ಸುಮಿ ಹಾಗೂ ಎಕ್ಸ್ ಇಂಡಿಯಾ ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ವಿಸ್ತರಿಸುವ ಚಿಂತನೆ ವಿರೋಧಿಸಿ ಎಂಟು ದಿನದಿಂದ ನಡೆಯುತ್ತಿರುವ ಹೋರಾಟದ ಬಗ್ಗೆ ದೃಢ ನಿಲುವು ತಾಳಬೇಕು’ ಎಂದು ಹೋರಾಟಗಾರರು ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗೆ ಪತ್ರ ಬರೆದಿದ್ದಾರೆ.

ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ಸಮಿತಿ ನಿರಂತರ ಹೋರಾಟ ನಡೆಸುತ್ತಿದೆ. ನಿತ್ಯ ಒಂದೊಂದು ಸಂಘಟನೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ. 

‘ಈ ಕಾರ್ಖಾನೆಗಳ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಜ. 24ರಂದು ನಡೆದಿದ್ದ ಕೊಪ್ಪಳ ಬಂದ್‌ ವೇಳೆ ಸಾವಿರಾರು ಜನರ ಎದುರು ಸ್ವಾಮೀಜಿ, ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡುವುದಿಲ್ಲ ಎನ್ನುವ ಆದೇಶ ಪ್ರತಿಯನ್ನು ಸರ್ಕಾರದಿಂದ ತರಬೇಕು ಎಂದು ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದರು. ಇದಕ್ಕಾಗಿ 15 ದಿನ ಗಡುವು ಕೊಡಲಾಗಿತ್ತು. ಈಗ ಗಡುವು ಮುಗಿದಿದ್ದು, ಹೋರಾಟದ ವಿಚಾರದಲ್ಲಿ ದೃಢನಿಲುವು ತಾಳಬೇಕು’ ಎಂದು ಜಂಟಿ ಸಮಿತಿ ಸದಸ್ಯರು ಸ್ವಾಮೀಜಿಗೆ ಪತ್ರ ಬರೆದಿದ್ದಾರೆ.

ADVERTISEMENT

‘ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಠದಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡುವಾದಾಗಿ ಎಚ್ಚರಿಕೆ ನೀಡಬೇಕು. ನಮ್ಮ ಹೋರಾಟಕ್ಕೆ ಜೊತೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಕಾರ್ಖಾನೆಗಳಿಂದ ಬಾಧಿತವಾದ ಗ್ರಾಮಗಳ ಜನರಿಗೆ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಮಾಡಿಸಬೇಕು. ಮುಖ್ಯಮಂತ್ರಿ ಆ ಹಳ್ಳಿಗಳಿಗೆ ಭೇಟಿ ನೀಡಬೇಕು
–ಅಲ್ಲಮಪ್ರಭು, ಬೆಟ್ಟದೂರು ಸಮಿತಿಯ ಜಂಟಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.