
ಕೊಪ್ಪಳ: ‘ಇಲ್ಲಿನ ರೈತರ ಭೂಮಿ ಕಸಿದುಕೊಂಡ ಕಾರ್ಖಾನೆಗಳಿಗೆ ಬೆಂಬಲವಾಗಿ ಟೊಂಕಕಟ್ಟಿ ನಿಂತವರು ಯಾರು ಎಂದು ಜನರಿಗೆ ಗೊತ್ತಿದೆ. ಕೃಷಿ, ಆರೋಗ್ಯ, ಕೊನೆಯದಾಗಿ ಜೀವನ ಕಳೆದುಕೊಳ್ಳುತ್ತಿರುವ ಕಾರ್ಖಾನೆ ಸುತ್ತುವರಿದ ಹಳ್ಳಿಗಳ ಜನರು ಸಿಡಿದೇಳಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಿ.ಆರ್.ನಾರಾಯಣರೆಡ್ಡಿ ಆಗ್ರಹಿಸಿದರು.
ಬಲ್ಡೋಟಾ, ಬಿಎಸ್‌ಪಿಎಲ್. ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟದ 36ನೇ ದಿನವಾದ ಶುಕ್ರವಾರ ಮಾತನಾಡಿದ ಅವರು ‘ಇಲ್ಲಿನ ಗವಿಮಠದ ಸ್ವಾಮೀಜಿ ಕಣ್ಣೀರು ಹಾಕಿದ್ದು ರಾಜ್ಯದ ಜವಾಬ್ದಾರಿಯುತ ಜನ ಗಮನಿಸಿದ್ದಾರೆ. ದೂಳು, ಹೊಗೆ ಕುಡಿಸಿ ಚೆಲ್ಲಾಟವಾಡುತ್ತೇವೆ ಎಂದರೆ ಬಿಡಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನ ಸಮಯದಲ್ಲಿ ಹೋರಾಡುತ್ತೇವೆ’ ಎಂದರು.
ಕೇಂದ್ರೀಯ ಬಸ್ ನಿಲ್ದಾಣ ಮುಂದಿರುವ ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಧಿಕ್ಕಾರದ ಘೋಷಣೆ ಕೂಗುತ್ತ ಅಶೋಕ ವೃತ್ತದಲ್ಲಿ ತಹಶೀಲ್ದಾರ್ ವಿಠ್ಠಲ್ ಚೌಗಲಾ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ನಗರಸಭೆ ಆಯುಕ್ತರಿಗೆ ಮನವಿ ಕೊಟ್ಟರು.
ಕರ್ನಾಟಕ ರಾಷ್ಟ್ರ ಸಮಿತಿ ಸೈನಿಕ ಎಲ್.ಜೀವನ್, ಹೋರಾಟ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಮುಖರಾದ ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಿ.ಎಚ್.ಪೂಜಾರ, ಎಚ್.ಎನ್. ಗೋವಿಂದರೆಡ್ಡಿ, ಯಲ್ಲಪ್ಪ ಬಾಬರಿ, ಅಂದಪ್ಪ ಹುರಳಿ, ವೆಂಕರೆಡ್ಡಿ ಚುಕನಕಲ್, ಸಾವಿತ್ರಿ ತೆಗ್ಗಿನಮನಿ, ರೇಣುಕಾ ಬಿನ್ನಾಳ, ಶರಣಮ್ಮ ಮೇಟಿ, ಹನುಮಂತಪ್ಪ ಮುರಡಿ ಸೇರಿ ಅನೇಕರು ಪಾಲ್ಗೊಂಡಿದ್ದರು.
ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ: ಹಾಲವರ್ತಿ ಬಳಿಯಿರುವ ಬಿಎಸ್‌ಪಿಎಲ್ ಕಾರ್ಖಾನೆ ತಕ್ಷಣ ಪ್ರಾರಂಭಿಸಿ ನಮ್ಮ ಮಕ್ಕಳ ಉದ್ಯೋಗಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಭವನದ ಮುಂದೆ ಭೂಮಿ ಕಳೆದುಕೊಂಡ ರೈತರು ಪ್ರತಿಭಟನೆ ನಡೆಸಿದರು. ಅವರು ಶುಕ್ರವಾರ ಪೋಷಣೆ ಕೂಗಿ ಒಂದೇ ಕಾರ್ಖಾನೆ ವಿರುದ್ಧ ಹೋರಾಟ ಸರಿಯಲ್ಲ ಕೆಲವು ಪ್ರಗತಿಪರ ಹೋರಾಟಗಾರರು ಪ್ರಾರಂಭವಾಗದ ಬಲ್ಡೋಟಾ ಕಾರ್ಖಾನೆಯಿಂದ ದೂಳು ಬರುತ್ತಿದೆ ಎನ್ನುತ್ತಿರುವುದು ಸರಿಯಲ್ಲ ಎಂದರು. ಹಾಲವರ್ತಿ ಗ್ರಾಮದ ಹನುಮಂತಪ್ಪ ಕೌದಿ ರೈತರಾದ ಬಸವರಾಜ್ ಹೊಸಮನಿ ನಾಗರಾಜ್ ಗುರಿಕಾರ ಪ್ರಾಣೇಶ್ ದುರ್ಗಪ್ಪಸ್ವಾಮಿ ಹನುಮೇಶ್ ಹೇಮಣ್ಣ ಮೇಟಿ ಕೇಮಪ್ಪ ಕಾಮಣ್ಣ ಕಂಬಳಿ ಕೆಂಚಪ್ಪ ಹಾಲವರ್ತಿ ಭೀಮೇಶ ಪೂಜಾರ ಈರಪ್ಪ ಓಜನಹಳ್ಳಿ ಬಸವರಾಜ್ ಮೇಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.