
ಕೊಪ್ಪಳ: 'ಕಾರ್ಖಾನೆಗಳ ಕೆಟ್ಟ ಮಾಲಿನ್ಯದಿಂದ 20ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ನಗರದ ಅರ್ಧಭಾಗದ ಜನರ ಆರೋಗ್ಯ ಹದೆಗೆಟ್ಟಿದೆ, ಅದರ ಮೂಲಕ ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಾಗಿದೆ, ಇಲ್ಲಿನ ಕಾರ್ಖಾನೆಗಳ ಹೊಗೆ ಕೇವಲ ಹೊಗೆ, ಬೂದಿ ಅಲ್ಲ ಅದು ವಿಷಾನಿಲ ಎನ್ನುವ ಅರಿವು ನಮಗಿದೆ’ ಎಂದು ಸಾಹಿತಿ ವೀರಣ್ಣ ಹುರಕಡ್ಲಿ ಹೇಳಿದರು.
ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸ್ ಇಂಡಿಯಾ ಸೇರಿದಂತೆ ವಿವಿಧ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ 64ನೇ ದಿನವಾದ ಶುಕ್ರವಾರ ಮಾತನಾಡಿ ‘ಕಾರ್ಖಾನೆ ಎಂದೊಡನೆ ಇಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಕುರಿತು ಮಾತನಾಡುವುದೇ ಅಸಹ್ಯವಾಗಿದೆ. ಈ ಹೋರಾಟಕ್ಕೆ ಜಾತ್ರೆಯ ನಂತರ ಇಡೀ ಭಾಗ್ಯನಗರ ಬರಲಿದೆ’ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಸಾಹಿತಿ ಎ.ಎಂ.ಮದರಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ವಿದ್ಯಾರ್ಥಿಗಳಾದ ಬಸವರಾಜ ಬಂಡಿ, ಹನುಮಂತಗೌಡ ಪೊಲೀಸ್ ಪಾಟೀಲ, ಕಿರಣಕುಮಾರ, ಅಮೀರ್ ಸಾಬ್, ರಾಮಚಂದ್ರ ಮುದ್ದಾಬಳ್ಳಿ, ಕುಮಾರ ಈರಗಾರ್, ಹನುಮೇಶ ಗಂಗಾವತಿ, ಪುಷ್ಪಲತಾ ಏಳುಬಾವಿ, ಎಸ್.ಮಹಾದೇವಪ್ಪ ಮಾವಿನಮಡು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಕ್ಬುಲ್ ರಾಯಚೂರು, ಗಂಗಮ್ಮ ಕವಲೂರು, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹಲಗೇರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.