ADVERTISEMENT

ಅಳವಂಡಿ | ಬೆಟಗೇರಿಯ ದುರ್ಗಾದೇವಿ ಮಹಾರಥೋತ್ಸವ ಇಂದು

ಜಾತ್ರೆ: ಕೃಷಿ ಗೋಷ್ಠಿ, ಹಾಸ್ಯ ಸಂಜೆ, ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

ಜುನಸಾಬ ವಡ್ಡಟ್ಟಿ
Published 26 ಮಾರ್ಚ್ 2025, 6:38 IST
Last Updated 26 ಮಾರ್ಚ್ 2025, 6:38 IST
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನ
ಅಳವಂಡಿ ಸಮೀಪದ ಬೆಟಗೇರಿ ಗ್ರಾಮದ ದುರ್ಗಾದೇವಿ ದೇವಸ್ಥಾನ   

ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಕಾರಣ ಪ್ರತಿ ಮನೆಯಲ್ಲೂ ಸಂಭ್ರಮ ಮನೆ ಮಾಡಿದ್ದು, ಬುಧವಾರ ಸಂಜೆ 5.30ಕ್ಕೆ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಲಿದೆ.

ಸೋಮವಾರ ಕಂಕಣಧಾರಣೆ, ಲಘು ರಥೋತ್ಸವ, ಮಂಗಳವಾರ ಪಾಯಸ ಹಾಗೂ ಅಗ್ನಿ ಕಾರ್ಯಕ್ರಮ ನಡೆದಿದೆ. ಬುಧವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಸಂಜೆ ಧ್ವಜಾರೋಹಣ, ದುರ್ಗಾದೇವಿ ಮಹಾರಥೋತ್ಸವ, ರಕ್ತದಾನ ಶಿಬಿರ, ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ. 

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು, ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಲಿದ್ದಾರೆ.

ADVERTISEMENT

ಮಾ. 27ರಂದು ಮದ್ದು ಸುಡುವುದು, ಕಡುಬಿನ ಕಾಳಗ, ಹಾಸ್ಯ ಕಲಾವಿದ ವೈಶಂಪಾಯನ ಅವರಿಂದ ಹಾಸ್ಯ ಸಂಜೆ, ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ ಅವರಿಂದ ಜಾನಪದ ಸಂಜೆ, 28ರಂದು ನೈಸರ್ಗಿಕ ಕೃಷಿ ಗೋಷ್ಠಿ ಹಾಗೂ ಪ್ರಾತ್ಯಕ್ಷಿಕೆ ಜರುಗಲಿದೆ. ಕೃಷಿ ತಜ್ಞರಾದ ಮಲ್ಲೇಶಪ್ಪ ಬಿಸಿ ರೊಟ್ಟಿ, ಬಸವರಾಜ ನಾವಿ ಉಪನ್ಯಾಸ ನೀಡಲಿದ್ದಾರೆ.

ಇತಿಹಾಸದ ಸ್ಮರಣೆ: ದೇವಿಯ ತವರು ಮನೆಯಾದ ಗೊರವರ ಮನೆಯಲ್ಲಿ ಉಡಿ ತುಂಬುವ ಮೂಲಕ ಗ್ರಾಮದ ಮನೆ ಮನೆಗೆ ದೇವಿಯ ಉತ್ಸವ ಮೂರ್ತಿಯೊಂದಿಗೆ ತೆರಳಿ ಜಾತ್ರೆಗೆ ಹಣ ಸಂಗ್ರಹಿಸಲಾಗುತ್ತದೆ. ಗೊರವರ ಮನೆ ತವರು ಮನೆಯಾಗಲು ಹಾಗೂ ದೇವತೆಯು ಬೆಟಗೇರಿಗೆ ಬರುವುದಕ್ಕಿಂತ ಮುಂಚೆ ಗಜೇಂದ್ರಗಡದಲ್ಲಿದ್ದರು ಎಂಬ ಐತಿಹ್ಯವಿದೆ.

ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಸಾವುಗಳು ಹೆಚ್ಚಾದಾಗ ಗೊರವರ ಮನೆಯ ಪೂರ್ವಿಕರ ಕನಸಿನಲ್ಲಿ ದೇವಿ ಬಂದು ನಿಮ್ಮ ಊರಿಗೆ ನಾನು ಬರುತ್ತೇನೆ ಎಂದಿದ್ದರು. ಅದರಂತೆ ಆ ಮನೆತನದ ಹಿರಿಯರು ದೇವಿಯನ್ನು ಬೆಟಗೇರಿ ಗ್ರಾಮಕ್ಕೆ ಕರೆತಂದರು ಎನ್ನುವ ಪ್ರತೀತಿಯೂ ಇದೆ. ‘ಬೆಟಗೇರಿ ಗ್ರಾಮಕ್ಕೆ ಬಂಡಿ ಅನ್ನ, ಗಿಂಡಿ ನೀರು’ ಎನ್ನುವ ಭರವಸೆ ನೀಡಿದರು. ಅದರಂತೆ ಅನ್ನದ ಕೊರತೆ ಆಗದ ಗ್ರಾಮವಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.

ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಬೆಟಗೇರಿಯಲ್ಲಿ ಹಬ್ಬದ ವಾತಾವರಣ ವಿದ್ಯುತ್ ದೀಪಗಳಿಂದ ದೇವಸ್ಥಾನ ಅಲಂಕಾರ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗಿ

ಪ್ರತಿ ವರ್ಷ ಗ್ರಾಮದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ದುರ್ಗಾದೇವಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ. ಈ ದೇವಸ್ಥಾನಕ್ಕೆ ಇತಿಹಾಸ ಇದೆ. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ

-ವೀರೇಶ ಸಜ್ಜನ ತಾ.ಪಂ ಮಾಜಿ ಸದಸ್ಯ ಬೆಟಗೇರಿ

ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಯಾವುದೇ ಜಾತಿ ಧರ್ಮ ಎನ್ನದೇ ಪ್ರತಿಯೊಬ್ಬರೂ ದೇವಿಯ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಬೆಟಗೇರಿ ಗ್ರಾಮ ವಿಶಿಷ್ಟತೆ ಹೊಂದಿದೆ.

-ಹನುಮರೆಡ್ಡಿ ಬೆಲ್ಲಡಗಿ ಗ್ರಾಮದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.