ADVERTISEMENT

ಕಾರಟಗಿ | 2ನೇ ಬೆಳೆಗೂ ನೀರು ಹರಿಸಲು ಒತ್ತಾಯ: ನ.4ರಂದು ಪ್ರತಿಭಟನೆ-ದಢೇಸೂಗೂರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 7:20 IST
Last Updated 29 ಅಕ್ಟೋಬರ್ 2025, 7:20 IST
ಬಸವರಾಜ ದಢೇಸೂಗೂರು
ಬಸವರಾಜ ದಢೇಸೂಗೂರು   

ಕಾರಟಗಿ: ‘ಸರ್ಕಾರ ಜಲಾಶಯಕ್ಕೆ ಗೇಟ್ ಅಳವಡಿಸುವ ನೆಪದಲ್ಲಿ ಎರಡನೇ ಬೆಳೆಯಿಂದ ರೈತರನ್ನು ವಂಚಿಸುತ್ತಿರುವುದನ್ನು ಖಂಡಿಸಿ ನವೆಂಬರ್ 4ರಂದು ಪಟ್ಟಣದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ದಢೇಸೂಗೂರು ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ತುಂಗಭದ್ರಾ ಜಲಾಶಯಕ್ಕೆ ಗೇಟ್ ಅಳವಡಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಕಾಲಹರಣ ಮಾಡಿದ್ದಾರೆ. ರೈತರಿಗೆ ಮೊದಲ ಬೆಳೆ ಬರುವುದೇ ಅನಿಶ್ಚಿತವಾಗಿದೆ. ಮತ್ತಷ್ಟು ಸಂಕಷ್ಟಕ್ಕೀಡು ಮಾಡಲೆಂದೇ ಗೇಟ್‌ ಅಳವಡಿಸಲು ಸರ್ಕಾರ ಮುಂದಾಗಿದೆ. ಇದು ರೈತ ವಿರೋಧಿ ಧೋರಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಒಂದು ತಿಂಗಳಲ್ಲಿ ಮುಗಿಯುವ ಕೆಲಸಕ್ಕೆ 8 ತಿಂಗಳು ತೆಗೆದುಕೊಂಡ ಉದಾಹರಣೆ ಇದೆ. ಜಲಾಶಯದ ಒಳಹರಿವು ಕ್ಷೀಣಿಸಿದ್ದು, ಗೇಟ್ ವಿಚಾರದಲ್ಲಿ ಆತಂಕ ಪಡಬೇಕಿಲ್ಲ. ಜಲಾಶಯದಲ್ಲಿ 40 ಟಿಎಂಸಿ ನೀರಿದ್ದಾಗಲೂ ಗೇಟ್ ಅಳವಡಿಸಲು ಅವಕಾಶವಿದೆ. ಹೀಗಾಗಿ ಜನವರಿಯಿಂದ ಏ.10 ರವರೆಗೆ ಎರಡನೇ ಬೆಳೆಗೆ ನೀರು ಹರಿಸಿ ರೈತರ ಹಿತ ಕಾಯಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಏಪ್ರಿಲ್‍ನಿಂದ ಜೂನ್‍ವರೆಗೂ 3 ತಿಂಗಳ ಕಾಲಾವಕಾಶ ಸಿಗಲಿದ್ದು, ಆ ಸಮಯದಲ್ಲಿ ಗೇಟ್ ಅಳವಡಿಸಲು ಮುಂದಾಗಬೇಕು. ನೀರು ಹರಿಸುವ ಜೊತೆಗೆ ಗೇಟ್ ಅಳವಡಿಸಲು ಸರ್ಕಾರ ಸಂಕಲ್ಪ ಮಾಡಬೇಕು’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಹಾಗೂ ಮುಖಂಡ ಜಿ.ತಿಮ್ಮನಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.