ಕುಕನೂರು: ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣಕ್ಕೆ ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಬಸವರಾಜ ಶಿವಪ್ಪ ಚಟ್ಟಿ ಎಂಬ ರೈತ ತನ್ನ ಎಂಟು ಎಕರೆ ಭೂಮಿಯಲ್ಲಿ ಉಳಿಮೆ ಮಾಡಿದ್ದ ಮೆಕ್ಕೆಜೋಳವನ್ನು ಬೇಸರದಿಂದಲೇ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದ್ದಾರೆ.
ಕಳೆದ ವರ್ಷದ ಬರಗಾಲದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಈ ವರ್ಷ ಕೂಡ ವರುಣ ಆರಂಭದಲ್ಲಿ ಕೈ ಹಿಡಿಯದ ಕಾರಣ ಬಿತ್ತನೆ ಮಾಡಿದ ಬೆಳೆಗಳು ಬಾಡುತ್ತಿವೆ. ಈ ಸಲ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಶೇ. 122ರಷ್ಟು ಹೆಚ್ಚು ಮಳೆ ಬಂದಿದೆ. ಮಾರ್ಚ್ ಆರಂಭದಿಂದ ಮೇ ಅಂತ್ಯದ ತನಕ ಅವಧಿಯಲ್ಲಿ ವಾಡಿಕೆ 7.86 ಸೆಂ.ಮೀ. ಇತ್ತು. ಆದರೆ 17.44 ಸೆಂ.ಮೀ. ಮಳೆ ಬಂದಿದೆ.
ಪೂರ್ವ ಮುಂಗಾರಿನಂತೆಯೇ ಮುಂಗಾರು ಹಂಗಾಮಿನಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಅನ್ನದಾತನದಾಗಿತ್ತು. ಆ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದ್ದು ತೇವಾಂಶ ಕೊರತೆಯಿಂದಾಗಿ ರೈತ ತಾನೇ ಬಿತ್ತನೆ ಮಾಡಿದ್ದ ಬೆಳೆಗಳನ್ನು ನೆಲಸಮ ಮಾಡುವ ಸಂಕಷ್ಟಕ್ಕೆ ಸಿಲುಕಿದ್ದಾನೆ.
ತಾಲ್ಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ಹಲವು ರೈತರು ಹೆಸರು, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಮುಂಗಾರು ಹಂಗಾಮಿನ ಬೆಳೆ ನಾಶ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದಾಗಿ ಬೆಳೆಗಳು ನೆಲದಲ್ಲಿಯೇ ಒಣಗಿ ಹೋಗಿವೆ.
‘ಎಂಟು ಎಕರೆ ಭೂಮಿಯಲ್ಲಿ ₹80 ಸಾವಿರ ಖರ್ಚು ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೂಲಿ ಕಾರ್ಮಿಕರಿಗೆ ಹಣ ನೀಡಿದ್ದೆ. ಆ ಎಲ್ಲ ಹಣ ಹಾಳಾಗಿದೆ. ಮುಂದೆಯೂ ಮಳೆ ಕೈಕೊಟ್ಟರೆ ರೈತರ ಸ್ಥಿತಿ ಚಿಂತಾಜನಕವಾಗಲಿದೆ’ ಎಂದು ಬಸವರಾಜ ಚಟ್ಟಿ ಬೇಸರ ತೋಡಿಕೊಂಡರು.
ತೇವಾಂಶದ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು ನಮ್ಮ ಗ್ರಾಮದಲ್ಲಿ ಐದಾರು ದಿನಗಳಿಂದ ಹಲವು ರೈತರು 30 ಎಕರೆಯಷ್ಟು ಬಾಡಿದ ಬೆಳೆಗಳನ್ನು ನಾಶ ಮಾಡಿದ್ದಾರೆ.ನಿಂಗಪ್ಪ ಗೋಡೆಕಾರ್ ರೈತ
ಮುಂಗಾರಿನ ಆರಂಭಿಕ ದಿನಗಳಲ್ಲಿ ಉತ್ತಮವಾಗಿ ಮಳೆಯಾಗಬೇಕಿತ್ತು. ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಬಾಡಿ ಹೋಗಿವೆ. ಅಸಹಾಯಕನಾಗಿ ಬೆಳೆ ನಾಶ ಮಾಡಿದ್ದೇನೆ.ಬಸವರಾಜ ಚಟ್ಟಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.