ADVERTISEMENT

ಯೋಜನೆಗಳು ರೈತರ ತಲುಪಲಿ

ಸಾಮಗ್ರಿ ವಿತರಣೆ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 12:34 IST
Last Updated 12 ಜನವರಿ 2022, 12:34 IST
ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ರೈತರಿಗೆ ಕೃಷಿ ಸಾಮಗ್ರಿ ವಿತರಿಸಿದರು  
ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ರೈತರಿಗೆ ಕೃಷಿ ಸಾಮಗ್ರಿ ವಿತರಿಸಿದರು     

ಕುಕನೂರು: ‘ಸರ್ಕಾರ ರೈತರ ಅನುಕೂಲಕ್ಕಾಗಿ ಹೊಸ, ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಅವುಗಳನ್ನು ರೈತರಿಗೆ ತಲುಪಿಸುವ ಕಾರ್ಯ ತ್ವರಿತವಾಗಿ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ರೈತರಿಗೆ ಕೃಷಿ ಸಾಮಗ್ರಿ ವಿತರಿಸಿ ಮಾತನಾಡಿ,‘ಅಧಿಕ ಪ್ರಮಾಣದ ರಸ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ವೈಜ್ಞಾನಿಕ ಮಾದರಿಗಳನ್ನು ಅನುಸರಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕೊಪ್ಪಳ ಏತ ನೀರಾವರಿ ಯೋಜನೆಯ ಕುರಿತ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆಗೆ ಹೆಚ್ಚು ಮಹತ್ವ ಕೊಡಲ್ಲ. ಜನತೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಳ್ಳು ಹೇಳಲು ಹೊರಟಿದ್ದಾರೆ. ಈ ಹಿಂದೆ ಆಡಳಿತ ನಡೆಸುವಾಗ ಈ ಯೋಜನೆ ಬಗ್ಗೆ ಯಾಕೆ ಮಾತನಾಡಲಿಲ್ಲ. ಇದೀಗ ಯೋಜನೆ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಉಲ್ಟಾ ಹೊಡೆಯುವುದು ಶೋಭೆ ತರುವಂತದಲ್ಲ ಎಂದು ಹರಿಹಾಯ್ದರು.

ADVERTISEMENT

ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ನನಗೆ ವಹಿಸಿದ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ಶೀಘ್ರದಲ್ಲಿಯೇ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ಜಿಲ್ಲಾ ಕೃಷಿ ಅಧಿಕಾರಿ ಸದಾಶಿವ್ ವಿ., ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಾಣೇಶ್, ವೀರಣ್ಣ ಹುಬ್ಬಳ್ಳಿ, ಅಮರೇಶ ಹುಬ್ಬಳ್ಳಿ, ವಸಂತ ಬಾವಿಮನಿ ಹಾಗೂ ಕಳಕಪ್ಪ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.