ADVERTISEMENT

ಕನಕಗಿರಿ: ರಸ್ತೆಯಲ್ಲಿ ರಾಶಿ; ಸಂಚಾರ ದುಸ್ತರ

ಮೆಹಬೂಬ ಹುಸೇನ
Published 19 ಏಪ್ರಿಲ್ 2025, 4:56 IST
Last Updated 19 ಏಪ್ರಿಲ್ 2025, 4:56 IST
<div class="paragraphs"><p><strong>ಕನಕಗಿರಿ ಸಮೀಪದ ಸೂಳೇಕಲ್ ಗ್ರಾಮದ ರಸ್ತೆಯಲ್ಲಿ ಭತ್ತದ ರಾಶಿ ಹಾಕಿರುವುದು ಶುಕ್ರವಾರ ಕಂಡು‌ ಬಂತು</strong></p></div>

ಕನಕಗಿರಿ ಸಮೀಪದ ಸೂಳೇಕಲ್ ಗ್ರಾಮದ ರಸ್ತೆಯಲ್ಲಿ ಭತ್ತದ ರಾಶಿ ಹಾಕಿರುವುದು ಶುಕ್ರವಾರ ಕಂಡು‌ ಬಂತು

   

ಕನಕಗಿರಿ: ಗಂಗಾವತಿ–ಲಿಂಗಸುಗೂರು ರಸ್ತೆಯಲ್ಲಿ ಈಗ ಭತ್ತವನ್ನು ಶುಚಿ ಮಾಡುವ ರೈತರದ್ದೇ ಕಾರುಬಾರು. ಇಲ್ಲಿನ ತಿಪ್ಪನಾಳ, ಸೂಳೇಕಲ್, ಅರಳಿಹಳ್ಳಿ, ಕೇಸರಹಟ್ಟಿ, ಹೇರೂರು ಗ್ರಾಮದಿಂದ ಹಿಡಿದು ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದವರೆಗಿನ 20 ಕಿಮೀ ದೂರದ ಡಾಂಬರೀಕರಣ ರಸ್ತೆಯನ್ನು ರೈತರು ತಾವು ಬೆಳೆದ ಭತ್ತವನ್ನು ಶುಚಿ ಉಪಯೋಗಿಸುತ್ತಿದ್ದಾರೆ.

ಭತ್ತದ ಬೆಳೆಯನ್ನು ಕಟಾವ್ ಮಾಡಿರುವ ರೈತರು ಅದನ್ನು ಶುಚಿತ್ವಗೊಳಿಸುವಲ್ಲಿ ಮಗ್ನರಾಗಿದ್ದಾರೆ. ಭತ್ತವನ್ನು ರಸ್ತೆಯ ಎರಡು ಕಡೆ ಹಾಕಿ ಅದನ್ನು ತೂರಿ ಕಸ, ಕಡ್ಡಿಯನ್ನು ಬೇರ್ಪಡಿಸುವ ಕೆಲಸ ಭರದಿಂದ ನಡೆದಿದೆ. ರಸ್ತೆಯಲ್ಲಿಯೇ ರಾಶಿ ಇರುವುದರಿಂದ ವಾಹನ ಸಂಚಾರ ಮತ್ತು ಪ‍್ರಯಾಣಿಕರಿಗೆ ತೊಂದರೆಯಾಗಿದೆ. ಎದುರುಗಡೆ ವಾಹನ ಬಂದರೆ ಹೇಗೆ‌ ನಿಯಂತ್ರಣ ಮಾಡಬೇಕೆಂಬ ಚಿಂತೆ ವಾಹನ ಚಾಲಕರದ್ದಾಗಿದೆ.

ADVERTISEMENT

‘ಕಳೆದ ಹತ್ತು ವರ್ಷಗಳಿಂದಲೂ ರಸ್ತೆಯಲ್ಲಿ ಬೆಳೆಗಳ ಶುಚಿತ್ವ ನಡೆಯುತ್ತಿದ್ದು ರಸ್ತೆ ಅಪಘಾತದಿಂದಾಗಿ ಹತ್ತಕ್ಕೂ ಹೆಚ್ಚು ಜನ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ನಡೆದಾಗ ಮಾತ್ರ ಗಂಭೀರವಾಗಿ ತೆಗೆದುಕೊಳ್ಳುವ ಅಧಿಕಾರಿ ವರ್ಗ ಆ‌ಮೇಲೆ ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾ ಬಂದಿದೆ’ ಎಂದು ಸ್ಥಳೀಯರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ ಭತ್ತವನ್ನು ಹರಡಿ ಸ್ವಚ್ಛಗೊಳಿಸಿದರೆ ರಾತ್ರಿ ವೇಳೆ ಪ್ಲಾಸ್ಟಿಕ್‌ ತಾಡಪತ್ರೆಗಳಿಂದ ಮುಚ್ಚಿ‌ ದೊಡ್ಡ ಕಲ್ಲುಗಳನ್ನು ಹೇರುತ್ತಾರೆ.

ಸಂಚಾರಕ್ಕೆ ಅಡಚಣೆ: ರಸ್ತೆಯಲ್ಲಿ ಭತ್ತದ ರಾಶಿ ಹಾಕಿರುವುದರಿಂದ‌ ಸಂಚಾರಕ್ಕೆ ತೀವ್ರ ಅಡಚಣೆ ಆಗಿದೆ. ರಾತ್ರಿ ವೇಳೆಯಲ್ಲಿ ಸಂಚಾರ‌ ದುಸ್ತರವಾಗುತ್ತದೆ. ದ್ವಿ‌ಚಕ್ರ ವಾಹನ ಸವಾರರು ಸ್ವಲ್ಪ‌ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂದು ರಾಜಶೇಖರ ಹೇಳಿದರು.

ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಇತರೆ ಧಾನ್ಯಗಳನ್ನು ರಸ್ತೆಯಲ್ಲಿ ಹಾಕಿ ಶುಚಿ ಮಾಡುವುದು‌ ಸಹ‌ ಇಲ್ಲಿ ‌ನಿಂತಿಲ್ಲ. ಕನಕಗಿರಿಯಿಂದ ಕೊಪ್ಪಳದವರೆಗಿನ ರಸ್ತೆಯಲ್ಲಿಯೂ ಇದೇ ಸ್ಥಿತಿ ಇದೆ. ರಾತ್ರಿ ವೇಳೆ ದವಸ, ಧಾನ್ಯಗಳ ರಾಶಿಗಳನ್ನು ಪ್ಲಾಸ್ಟಿಕ್‌ಗಳಿಂದ ಮುಚ್ಚಿ ಅದಕ್ಕೆ ಕಲ್ಲುಗಳಿಂದ ರಕ್ಷಣೆ ನೀಡಿದ್ದು ವಾಹನ ಸಂಚರಿಸಲು ಸಮಸ್ಯೆಯಾಗಿದೆ.

‘ಬಹಳಷ್ಟು ಅಪಘಾತಗಳು ನಡೆದರೂ ಸಂಬಂಧಿಸಿದ ಇಲಾಖೆಗಳು ರಾಶಿ ತೆರವಿಗೆ ಮುಂದಾಗುತ್ತಿಲ್ಲ ಎಂದು ವಾಹನ ಸವಾರರು ದೂರಿದ್ದಾರೆ. ರಾಶಿ ಮಾಡುವ ರೈತರಿಗೆ ಪೊಲೀಸ್ ಇಲಾಖೆ ಈ ಹಿಂದೆ ನೋಟಿಸ್ ನೀಡಿ ದವಸ, ಧಾನ್ಯಗಳನ್ನು ಹಾಕದಂತೆ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳ ನೋಟಿಸ್‌ಗೆ ಬೆಲೆ ಇಲ್ಲದಂತಾಗಿದ್ದು ರೈತರು ಮತ್ತದೇ ಚಾಳಿ ಮುಂದುವರಿಸಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.

ಜನಪ್ರತಿನಿಧಿಗಳು, ಎಪಿಎಂಸಿ ಆಡಳಿತ ಮಂಡಳಿಯವರು ರೈತರಿಗೆ ಸಮರ್ಪಕವಾಗಿ ಕಣಗಳನ್ನು ನಿರ್ಮಿಸಿಕೊಟ್ಟರೆ ರಸ್ತೆಯಲ್ಲಿ ರಾಶಿ ಮಾಡುವಂತಹ ಸ್ಥಿತಿ ಬರುವುದಿಲ್ಲ. ಚುನಾವಣೆ ಸಮಯದಲ್ಲಿ ಗ್ರಾಮಕ್ಕೆ ಬಂದಾಗ ಬರೀ ಭರವಸೆ ನೀಡಿದ್ದು ಸಮಸ್ಯೆಯಾಗಿ ಉಳಿದಿದೆ ಎಂದು ಉಮಾಕಾಂತ ಆಪಾದಿಸಿದರು.

ರಸ್ತೆಯ ಎರಡು ಬದಿಯಲ್ಲಿ ರೈತರು ಭತ್ತದ ರಾಶಿ ಹಾಕಿ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಗಮನ ಹರಿಸುತ್ತಿಲ್ಲ
ಶಿವರಾಜ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.