
ಕುಕನೂರು: ಹುಳಗಡ್ಲಿ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ ಮಾತನಾಡಿ,‘ಈ ಹಿಂದೆ ನಾವು ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಮನವಿ ಮಾಡಿದ್ದೆವು. ಆದರೆ, ಸರ್ಕಾರ ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ತೆರೆಯದ ಕಾರಣ ರೈತರು ತುಂಬಾ ನಷ್ಟ ಅನುಭವಿಸಿದ್ದಾರೆ’ ಎಂದರು.
‘ಕಡಲೆ ಬೆಳೆಗೆ ಬೆಂಬಲ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ, ರೈತರಿಗೆ ಬರ ಪರಿಹಾರ ಕೊಡಬೇಕು. ಎಪಿಎಂಸಿ ಆವರಣದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಈಗಾಗಲೇ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೂ ಇನ್ನೂವರೆಗೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ’ ಎಂದು ಹೇಳಿದರು.
‘15 ದಿನಗಳೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಕುಕನೂರು ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಅಂದಪ್ಪ ಹುರುಳಿ, ದೇವಪ್ಪ ಸೋಬಾನದ, ಮಲ್ಲಪ್ಪ ಚಳಿ ಮರದ್, ಹನುಮಪ್ಪ ಮರಡಿ, ಉಮೇಶ ಬೆದವಟ್ಟಿ, ಬಸವರಾಜ ದೊಡ್ಡಮನಿ, ಈರಪ್ಪ ಈಬೇರಿ, ಶರಣಪ್ಪ ಯತ್ನಟ್ಟಿ, ಖಾಸಿಂಸಾಬ್ ಸಂಗಟಿ, ಶ್ರೀಕಾಂತ ಬಿಳಿಗಿ, ಬಸಪ್ಪ ಲಾಳಗೊಂಡರ್, ಹನುಮಪ್ಪ ಗೋರ್ಲೆಕೊಪ್ಪ, ಶರಣಪ್ಪ ದಿವಟಿರ, ಶಿವಪ್ಪ ಸಂದಿಮನಿ ಹಾಗೂ ಗೂಳಪ್ಪ ಲಾಲಗೊಂಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.