ADVERTISEMENT

ಕನಕಗಿರಿ: ಪ್ರತಿಭಟನೆಗೆ ಸೀಮಿತವಾದ ಬಂದ್

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:45 IST
Last Updated 28 ಸೆಪ್ಟೆಂಬರ್ 2021, 3:45 IST
ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಕಾರಣ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು
ಕನಕಗಿರಿಯ ವಾಲ್ಮೀಕಿ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಕಾರಣ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು   

ಕನಕಗಿರಿ: ಕೃಷಿಗೆ ಸಂಬಂಧಿಸಿದ ಕಾನೂನುಗಳ ತಿದ್ದುಪಡಿ ವಿರೋಧಿಸಿ ರೈತರು, ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಇಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು.

ಸಿಐಟಿಯು, ಬಿಸಿಯೂಟ ನೌಕರರ ಸಂಘ, ಗಂಜ್ ಹಮಾಲರ ಸಂಘ, ಎಸ್ಎಫ್‌ಐ, ಕೂಲಿಕಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಬಿಸಿಯೂಟ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ, ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ, ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಸುಭಾನ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ, ರೈತ, ಬಡವರ ವಿರೋಧಿ ನೀತಿಯನ್ನು ಖಂಡಿಸಿದರು.

ADVERTISEMENT

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ಸಾಗಿಸಲು ಜನ ಸಾಮಾನ್ಯರು ನಿತ್ಯವೂ ಪರದಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಸಿಐಟಿಯು ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ, ಕಾರ್ಯದರ್ಶಿ ಈರಮ್ಮ, ಸಿಪಿಐ(ಎಂ) ಕಾರ್ಯದರ್ಶಿ ಪರಸಪ್ಪ, ಬಜಾರ ಹಮಾಲರ ಸಂಘದ ಕಾರ್ಯದರ್ಶಿ ನಬೀಸಾಬ, ಗಂಜ್ ಹಮಾಲರ ಸಂಘದ ಅಧ್ಯಕ್ಷ ವೀರನಗೌಡ, ಎಸ್ಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ, ಬಿಸಿಯೂಟ ನೌಕರರ ಸಂಘದ ಮುಂದಾಳು ನೂರಜಹಾನ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.

ಶಾಲಾ ಕಾಲೇಜುಗಳು, ಬ್ಯಾಂಕ್ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳು ತೆರೆದಿದ್ದವು. ಬಸ್ ಸಂಚಾರ ಎಂದಿನಂತೆ ಇತ್ತು. ಸೋಮವಾರದ ಸಂತೆಗೆ ಯಾವುದೇ ಅಡಚಣೆ ಇರಲಿಲ್ಲ. ಪಿಎಸ್ಐಗಳಾದ ತಾರಾಬಾಯಿ, ಕಾಶೀಂಸಾಬ ಅವರು ಬಂದೋಬಸ್ತ್‌ ಕಲ್ಪಿಸಿದ್ದರು.

ಭಾರತ ಬಂದ್‌ಗೆ ಕಾಂಗ್ರೆಸ್, ಜೆಡಿಎಸ್ ಪಕ್ಷದವರು ಬೆಂಬಲ ವ್ಯಕ್ತ ಪಡಿಸಿದರೂ ಪ್ರತಿಭಟನೆಯಲ್ಲಿ ಭಾಗವಹಿಸದೆ ಇರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.