ADVERTISEMENT

ಸರ್ಕಾರದ ನೀತಿಗಳಿಂದ ಬದುಕು ದುಸ್ತರ: ಶರಣಪ್ಪ ದೊಡ್ಡಮನಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:45 IST
Last Updated 28 ಸೆಪ್ಟೆಂಬರ್ 2021, 3:45 IST
ಕಾರಟಗಿಯಲ್ಲಿ ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಕಾರಟಗಿಯಲ್ಲಿ ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು   

ಕಾರಟಗಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ಬೆಳಿಗ್ಗೆ ಅಂಗಡಿ–ಮುಂಗಟ್ಟುಗಳನ್ನು ಸ್ವಪ್ರೇರಣೆಯಿಂದ ಬಂದ್‌ ಮಾಡಲಾಗಿತ್ತು. ಪ್ರತಿಭಟನಾ ಮೆರವಣಿಗೆ, ಮನವಿ ಸಲ್ಲಿಕೆಯ ಬಳಿಕ ವ್ಯಾಪಾರಿಗಳು ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರು.

ಕರ್ನಾಟಕ ರೈತ ಸಂಘ, ಸಿಪಿಐಎಂ, ಸಿಪಿಎಂ, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಅಕ್ಷರ ದಾಸೋಹ ಯೋಜನೆಯ ಸಹಾಯಕರು ಪಾಲ್ಗೊಂಡಿದ್ದರು.

ADVERTISEMENT

ವಿಶೇಷ ಎಪಿಎಂಸಿಯಿಂದ ಕನಕದಾಸ ವೃತ್ತದವರೆಗೆ ಎತ್ತಿನ ಬಂಡಿಗಳೊಂದಿಗೆ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ರ‍್ಯಾಲಿಯಲ್ಲಿ ವ್ಯಕ್ತಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಹಾಕಿ ಸೀರೆ, ಬಳೆ ತೊಡಿಸಿ ಉಡಿ ತುಂಬುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಕನಕದಾಸ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆದ ಕಾರಣ ಕೆಲಕಾಲ ವಾಹನ ದಟ್ಟಣೆ ಉಂಟಾಯಿತು. ಕೆಲ ಸವಾರರು ಪರ್ಯಾಯ ಮಾರ್ಗದ ಮೂಲಕ ಸಂಚರಿಸಿದರು.

ಬಹಿರಂಗ ಸಭೆಯಲ್ಲಿ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ,‘ಬಿಜೆಪಿ ಅಮಾಯಕರನ್ನು ಅಂಧ ದೇಶ ಭಕ್ತಿಯಲ್ಲಿ ಮುಳುಗಿಸಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ. ಸರ್ಕಾರದ ಜನವಿರೋಧಿ ನೀತಿಗಳಿಂದ ಸಾಮಾನ್ಯರ ಬದುಕು ದುರ್ಲಬವಾಗಿದೆ. ದೇಶದೆಲ್ಲೆಡೆ ಹಸಿವು, ನಿರುದ್ಯೋಗ, ಬಡತನ ತಾಂಡವವಾಡುತ್ತಿದೆ’ ಎಂದು ದೂರಿದರು. ಕಾರ್ಪೊರೇಟ್ ಕಂಪನಿಗಳ ಹಿತರಕ್ಷಣೆಗೆ ಸರ್ಕಾರ ಮಂಡಿಯೂರಿ ಕುಳಿತಿದೆ. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದು ಕೃಷಿ ಹಾಗೂ ರೈತರನ್ನು ವಿನಾಶಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರೇಡ್-2 ತಹಶೀಲ್ದಾರ್ ವಿಶ್ವನಾಥ ಮುರಡಿಯವರಿಗೆ ಮನವಿ ಸಲ್ಲಿಸಲಾಯಿತು.

ಕಾಂಗ್ರೆಸ್ ಬೆಂಬಲ: ರೈತ ಹಾಗೂ ಕನ್ನಡ ಪರ ಸಂಘಟನೆಗಳು ನಡೆಸಿದ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಗ್ನಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ, ಶರಣಪ್ಪ ಪರಕಿ, ನಾರಾಯಣಪ್ಪ ಈಳಿಗೇರ, ಖಾಸೀಂಸಾಬ್, ಅಕ್ಕಮಹಾದೇವಿ, ಹನುಮಂತಪ್ಪ, ವೆಂಕಟೇಶ ಸೋಮನಾಳ, ಹನುಮೇಶ, ರಮೇಶ ಭಂಗಿ, ಖಾಜಾಹುಸೇನ್‌ ಮುಲ್ಲಾ, ಮರಿಯಪ್ಪ ಸಾಲೋಣಿ, ಪ್ರಶಾಂತ, ತೊಂಡೇಕಾರ ಪರಸಪ್ಪ, ಗೋಮರ್ಸಿ ಶ್ರೀನಿವಾಸ, ಹನುಮಂತರೆಡ್ಡಿ, ಮೂಲಿಮನಿ ವಿರೂಪಣ್ಣ, ಜಂಗ್ಲಿ ಶಾಂತಮ್ಮ, ಮಲ್ಲಮ್ಮ ನಡುವಿನ ಹಾಗೂ ಹಮಾಲರ ಸಂಘದ ಅಧ್ಯಕ್ಷ ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.