ಕೊಪ್ಪಳ: ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ₹80 ಸಾವಿರ ದಂಡ ವಿಧಿಸಿ ಇಲ್ಲಿನ ಫೋಕ್ಸೊ ನ್ಯಾಯಾಲಯ ಆದೇಶ ಮಾಡಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಯಂಕಪ್ಪ ಗೊಲ್ಲರ ಎಂಬಾತ ವರ್ಷದ ಹಿಂದೆ ಕಿರಿಯ ವಯಸ್ಸಿನ ಮಗಳ ಮೇಲೆ ದನ ಮೇಯಿಸಲು ವೆಂಕಟಾಪುರ ಮತ್ತು ಹೊಸೂರ ಸೀಮಾದಲ್ಲಿರುವ ಗುಡ್ಡಕ್ಕೆ ಕರೆದುಕೊಂಡು ಹೋದ ಸಮಯದಲ್ಲಿ ಕುಡಿದ ಅಮಲಿನಲ್ಲಿ ಹೆದರಿಸಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ.
ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಹೆದರಿಸಿದ್ದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು ಕೆಲ ತಿಂಗಳ ಬಳಿಕ ಗಂಡು ಮಗುವಿಗೆ ಜನ್ಮನೀಡಿದ್ದಾಳೆ.
ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪಿಎಸ್‌ಐ ಆಗಿದ್ದ ಸುರೇಶ ಡಿ. ಪ್ರಕರಣದ ಪ್ರಥಮ ಹಂತದ ತನಿಖೆ ನಿರ್ವಹಿಸಿದ್ದರು. ಮುಂದಿನ ತನಿಖೆಯನ್ನು ಅಂದಿನ ಕೊಪ್ಪಳ ಸಿಪಿಐ ರವಿ ಉಕ್ಕುಂದ ನಿರ್ವಹಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ವಿಚಾರಣೆ ನಡೆಸಿ ಯಂಕಪ್ಪ ಮೇಲಿನ ಆರೋಪ ಸಾಬೀತಾಗಿದೆ ಎಂದು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಪ್ರಾಸಿಕ್ಯೂಟರ್ ಗೌರಮ್ಮ ಎಲ್. ದೇಸಾಯಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.