ಕೊಪ್ಪಳ: ‘ತಾಲ್ಲೂಕಿನ ಕವಲೂರು ಗ್ರಾಮದಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದ ವೇಳೆ ಏನೂ ತಪ್ಪು ಮಾಡದ ಯುವಕರ ವಿರುದ್ಧ ಕೊಪ್ಪಳ ತಹಶೀಲ್ದಾರ್ ದೂರು ದಾಖಲಿಸಿದ್ದು, ಇದನ್ನು ವಾಪಸ್ ಪಡೆಯದಿದ್ದರೆ ಮತ್ತೆ ಹೋಬಳಿ ಮಟ್ಟದಲ್ಲಿ ಹೋರಾಟ ಮಾಡಲಾಗುವುದು’ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರಾದ ರತ್ನಾ ಹುಟಗನೂರು, ರೇಣುಕಾ ಬೆಟಗೇರಿ, ಶೋಭಾ ಬೀಳಗಿ, ಫಾತಿಮಾ ದೊಡ್ಡಮನಿ ಹಾಗೂ ಗಂಗಮ್ಮ ಸಿಂಧೋಗಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ’ಅಂದಿನ ಪ್ರತಿಭಟನೆ ವೇಳೆ ಮಾತಿನ ಚಕಮಕಿಯಷ್ಟೇ ಆಗಿದ್ದು ತಹಶೀಲ್ದಾರ್ ವಿಠ್ಠಲ ಚೌಗುಲಾ ದೂರಿನಲ್ಲಿ ತಿಳಿಸಿದರೆ ಯಾರೂ ಜೀವ ಬೆದರಿಕೆ ಒಡ್ಡಿಲ್ಲ. ನಮ್ಮೂರಿನ ಯುವಕರು ಅಷ್ಟೊಂದು ಕ್ರೂರಿಗಳೂ ಅಲ್ಲ’ ಎಂದರು.
‘ರಸ್ತೆ ನಿರ್ಮಿಸಿಕೊಡಿ ಎನ್ನುವ ನಮ್ಮ ಬೇಡಿಕೆಗೆ ತಹಶೀಲ್ದಾರ್ ಸರಿಯಾಗಿ ಉತ್ತರ ಕೊಡದ ಕಾರಣ ಯುವಕರು ಆಕ್ರೋಶಗೊಂಡಿದ್ದರು. ಮೂಲ ಸೌಕರ್ಯದ ಬೇಡಿಕೆಗಾಗಿ ಹೋರಾಡಿದರೆ ಪ್ರಕರಣ ದಾಖಲಿಸುತ್ತಲೇ ಹೋದರೆ ಎಲ್ಲರೂ ಜೈಲಿನಲ್ಲಿ ಇರಬೇಕಾಗುತ್ತದೆ. ಪ್ರತಿಭಟನೆ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಪುರುಷರಿದ್ದರೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ 14 ಹೆಸರುಗಳನ್ನು ನೀಡಿದ್ದು ಯಾರು’ ಎಂದು ಪ್ರಶ್ನಿಸಿದರು. ಇದರಲ್ಲಿ ಕೆಲವರನ್ನು ಗುರಿಯಾಗಿರಿಸಿ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.
‘ಅಂದು ಯಾರೂ ಕಾನೂನು ಕೈಗೆತ್ತಿಕೊಂಡಿಲ್ಲ. ಒಂದು ವೇಳೆ ಹಾಗೆ ಮಾಡಿದ್ದರೆ ಪೊಲೀಸರು ತಪ್ಪಿತಸ್ಥರನ್ನು ಅಲ್ಲಿಯೇ ಬಂಧಿಸಬೇಕಿತ್ತು. ಕೆಲ ಮುಗ್ದ ಜನರ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರೂ ಪ್ರಶ್ನಿಸಬಾರದು, ಹೋರಾಟ ಮಾಡಬಾರದು ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕಿದರೆ ಸಂವಿಧಾನಕ್ಕೆ ಬೆಲೆ ಎಲ್ಲಿರುತ್ತದೆ’ ಎಂದು ಮಹಿಳೆಯರು ಪ್ರಶ್ನಿಸಿದರು.
ರಸ್ತೆ ನಿರ್ಮಿಸುವಂತೆ ಕವಲೂರಿನಲ್ಲಿ ನಡೆದಿದ್ದ ಬಂದ್ 14 ಜನರ ವಿರುದ್ಧ ಅಳವಂಡಿಯಲ್ಲಿ ದಾಖಲಾಗಿರುವ ದೂರು ತಹಶೀಲ್ದಾರ್ ನಡೆಗೆ ಆಕ್ರೋಶಗೊಂಡ ಗ್ರಾಮಸ್ಥರು
ಊರು ತೊರೆದ ಯುವಕರು ಎಫ್‌ಐಆರ್‌ನಲ್ಲಿ ಹೆಸರಿರುವ ಬಹುತೇಕ ಯುವಕರು ದೂರು ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದಾಗಿ ಗ್ರಾಮವನ್ನೇ ತೊರೆದು ಬೇರೆ ಕಡೆ ಹೋಗಿದ್ದಾರೆ. ಇದರಿಂದಾಗಿ ಅವರನ್ನೇ ನಂಬಿಕೊಂಡ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯವನ್ನು ಪ್ರಸ್ತಾಪಿಸಿದ ಗ್ರಾಮದ ಮಹಿಳೆಯರು ‘ನಮ್ಮ ಗ್ರಾಮದಲ್ಲಿ ಬಹುತೇಕರು ಕೃಷಿಕರಿದ್ದಾರೆ. ಘಟನೆಯ ಬಳಿಕ ಯುವಕರು ಊರು ತೊರೆದಿದ್ದು ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕುಟುಂಬ ನಡೆಸಲೂ ಕಷ್ಟವಾಗುತ್ತಿದೆ’ ಎಂದು ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.