
ಕೊಪ್ಪಳ: ನಗರದ ಜನನಿಬಿಡ ಪ್ರದೇಶದಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದ್ದು, 10ಕ್ಕೂ ಹೆಚ್ಚು ಅಂಗಡಿಗಳು ಅಗ್ನಿಗೆ ಅಹುತಿಯಾಗಿವೆ.
ಕೇಂದ್ರೀಯ ಬಸ್ ನಿಲ್ದಾಣದ ಎದುರಿನಿಂದ ರೈಲು ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಈ ಅನಾಹುತ ನಡೆದಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪೇಂಟ್ ಮಾರಾಟ ಮಾಡುವ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಂಗಡಿಗಳೇ ಅಕ್ಕಪಕ್ಕದಲ್ಲಿದ್ದವು. ಎಟಿಎಂ ಕೂಡ ಇತ್ತು. ಅವಘಡದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಹೀಗಾಗಿ ಬೆಂಕಿ ವೇಗವಾಗಿ ಹರಡಿತಲ್ಲದೇ ದಟ್ಟ ಹೊಗೆಯೂ ವ್ಯಾಪಿಸಿತು. ಸ್ಥಳೀಯ ಅಗ್ನಿಶಾಮಕದ ದಳ ಸಿಬ್ಬಂದಿ, ನಗರಸಭೆಯ ಟ್ಯಾಂಕರ್‌ಗಳು ಮತ್ತು ಇಲ್ಲಿಗೆ ಸಮೀಪದಲ್ಲಿರುವ ವಿವಿಧ ಖಾಸಗಿ ಕಂಪನಿಗಳ ಅಗ್ನಿಶಾಮಕದ ದಳದ ವಾಹನಗಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಮೂರು ತಾಸಿನ ಬಳಿಕ ಬೆಂಕಿ ತಹಬಂದಿಗೆ ಬಂದಿತು.
‘ಮೊದಲು ಪೇಂಟ್ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.