ADVERTISEMENT

ಮಂಡಲಮರಿ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರು

ಗ್ರಾಮದಲ್ಲಿ ಹಲವು ದಿನಗಳಿಂದ ಡೆಂಗಿ ಜ್ವರದ ಶಂಕೆ; ಸಾಮೂಹಿಕ ತಪಾಸಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 3:55 IST
Last Updated 8 ಡಿಸೆಂಬರ್ 2022, 3:55 IST
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲಬುರ್ಗಾ ತಾಲ್ಲೂಕು ಮಂಡಲಮರಿ ಗ್ರಾಮದ ಯುವಕರು
ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಲಬುರ್ಗಾ ತಾಲ್ಲೂಕು ಮಂಡಲಮರಿ ಗ್ರಾಮದ ಯುವಕರು   

ಯಲಬುರ್ಗಾ: ತಾಲ್ಲೂಕಿನ ಮಂಡಲಮರಿ ಗ್ರಾಮದಲ್ಲಿ ಕಳೆದ ಎರಡು ವಾರದಿಂದ ಜನರ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದ್ದು, ಜ್ವರ ಹಾಗೂ ಮೈಕೈ ನೋವಿನಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಈಗಾಗಲೇ ಕುಷ್ಟಗಿ, ಬೇವೂರು ಹಾಗೂ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ಅನೇಕ ಯುವಕ–ಯುವತಿಯರು ಚಳಿ ಜ್ವರ, ಕೈ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪ್ರಕರಣಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾಮೂಹಿಕ ಚಿಕಿತ್ಸೆ ಮತ್ತು ತಪಾಸಣೆಗೆ ಮುಂದಾಗಬೇಕು ಎಂದು ಗ್ರಾಮದ ಸೋಮಲಿಂಗಪ್ಪ ಕುರಿ, ಬಸವರಾಜ ಮುಂಡಗರಿ ಆಗ್ರಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣಾ ವರದಿಗಳಲ್ಲಿ ವ್ಯತ್ಯಾಸಗಳಿವೆ. ಡೆಂಗಿ, ಇನ್ನಿತರ ಸಾಂಕ್ರಾಮಿಕ ಕಾಯಿಲೆಯು ಕಾಣಿಸಿಕೊಳ್ಳಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಗ್ರಾಮಕ್ಕೆ ಬೇರೆ ಬೇರೆ ಕಡೆಯಿಂದ ಪೂರೈಕೆಯಾಗುವುದರಿಂದ ಗ್ರಾಮಸ್ಥರ ಆರೋಗ್ಯದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿರಬಹುದು. ಗ್ರಾಮದಲ್ಲಿ ಸ್ವಚ್ಛತೆಯಿಲ್ಲದಾಗಿದೆ. ರಸ್ತೆಯ ಮೇಲೆ ಚರಂಡಿ ನೀರು ಇದ್ದ ಚರಂಡಿಗಳ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಅನಾರೊಗ್ಯಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಭೀಮನಗೌಡ ಪೊಲೀ ಸ್‍ಪಾಟೀಲ ಒತ್ತಾಯಿಸಿದ್ದಾರೆ.

ADVERTISEMENT

ಗ್ರಾಮದ ಶಿವನಗೌಡ ಪೊಲೀಸ್‍ಪಾಟೀಲ, ಮೈಲಾರಿ ಕರಡಿ, ಸಂತೋಷ ಕುರಿ, ನಾಗರತ್ನ ಯಲರ್ಬುತಿ, ಯಮನೂರಪ್ಪ ಏಳಗಡಗಿ ಅವರು ಡೆಂಗಿ ಜ್ವರದಿಂದ ಬಳಲುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಚಿಕಿತ್ಸೆ ನೀಡಬೇಕು.ಚರಂಡಿ ಮತ್ತು ಇನ್ನಿತರ ಪ್ರದೇಶದಲ್ಲಿ ಧೂಳೀಕರಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.