ADVERTISEMENT

‘ರೋಗ ನಿಯಂತ್ರಣ ಕ್ರಮ ಅನುಸರಿಸಿ’

ಹುಲುಸಾಗಿ ಬೆಳೆದ ಹೆಸರು ಬೆಳೆಗೆ ಮಳೆಯ ಆಸರೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 17:24 IST
Last Updated 3 ಜುಲೈ 2018, 17:24 IST
ಹನುಮಸಾಗರ ಸಮೀಪದ ಮಾವಿನಇಟಗಿ ಗ್ರಾಮದಲ್ಲಿ ಹೆಸರು ಬೆಳೆ ಉತ್ತಮವಾಗಿ ಬೆಳೆದಿರುವುದು 
ಹನುಮಸಾಗರ ಸಮೀಪದ ಮಾವಿನಇಟಗಿ ಗ್ರಾಮದಲ್ಲಿ ಹೆಸರು ಬೆಳೆ ಉತ್ತಮವಾಗಿ ಬೆಳೆದಿರುವುದು    

ಹನುಮಸಾಗರ: ’ಸದ್ಯ ಎಲ್ಲಡೆ ಹೆಸರು ಬೆಳೆ ಉತ್ತಮವಾಗಿರುವುದು ಕಂಡು ಬರುತ್ತಿದ್ದು, ಬೆಳೆಗೆ ಬೆಳೆಗೆ ರೋಗ ಬರುವ ಮುನ್ನವೇ ನಿಯಂತ್ರಣ ಕ್ರಮಗಳನ್ನು ಕೈಕೊಂಡರೆ ಮಾತ್ರ ಬೆಳೆ ರೈತರಿಗೆ ದಕ್ಕುತ್ತದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಮಂಗಳವಾರ ರೈತರಿಗೆ ಸಲಹೆ ನೀಡಿದರು.

ಮಳೆ ಕೊರತೆ ಹಾಗೂ ಮೋಡ ಮುಸುಕಿದ ವಾತಾವರಣದ ಕಾರಣದಿಂದಾಗಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಹರಡುವ ಸಾಧ್ಯತೆ ಇರುತ್ತದೆ. ಒಂದು ಬಾರಿ ಹಳದಿ ರೋಗ ಕಾಣಿಸಿಕೊಂಡರೆ ನಿಯಂತ್ರಣ ಮಾಡುವುದು ಕಷ್ಟವಾಗುವುದರಿಂದ ರೈತರು ಈಗಲೆ ಪ್ರತಿ ಲೀಟರ್‌ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಸಿಂಪಡಿಸಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು ಇಲ್ಲವೆ ಸುಟ್ಟು ಹಾಕಬೇಕು. ಕ್ರಿಮಿನಾಶಕವನ್ನು ಬೆಳೆಗೆ ಸಿಂಪಡಿಸುವುದಕ್ಕಿಂತ ಮೊದಲು ಬದುವಿಗೆ ಸಿಂಪಡಿಸಿದರೆ ಅಲ್ಲಿ ವಾಸಮಾಡಿರುವ ಜಿಗಿಹುಳು ನಿಯಂತ್ರಣಕ್ಕೆ ಬರುತ್ತವೆ ಎಂದರು.

ಬಿತ್ತನೆ ಸಮಯದಲ್ಲಿಯೇ ಟ್ರೈಕೋಡರ್ಮ್‌ ಪುಡಿಯಿಂದ ಬೀಜೋಪಚಾರ ಮಾಡಿ ಬಿತ್ತಿದರೆ ಹಾಗೂ ಬದುವುಗಳನ್ನು ಸ್ವಚ್ಛವಾಗಿಟ್ಟುಕೊಂಡಿದ್ದರೆ ನಂಜಾಣು ರೋಗದ ಭೀತಿ ಕಂಡುಬರುವುದಿಲ್ಲ ಎಂದು ಹೇಳಿದರು.

ADVERTISEMENT

ಈ ಬಾರಿ ಹೆಸರು ಬಿತ್ತನೆ ಅವಧಿ ಮುಗಿಯುವ ಹಂತದಲ್ಲಿಯೂ ಬಿತ್ತನೆಯಾಗಿದ್ದರೂ ಮಧ್ಯದಲ್ಲಿ ಬಂದ ಮಳೆ ಹೆಸರು ಬೆಳೆ ಹುಲುಸಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ನಾಲ್ಕು ವರ್ಷಗಳಿಂದ ಹೆಸರು ಬೆಳೆ ಬಿತ್ತನೆಗಷ್ಟೆ ರೈತರು ಸೀಮಿತರಾಗಿದ್ದರು. ಅಲ್ಲದೆ ಹೂವು, ಹೀಚು ಬಿಡುವ ಈ ಹಂತದಲ್ಲೂ ಅಲ್ಪಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹೆಸರು ಬೆಳೆ ರೈತರ ಕೈಹಿಡಿಯುವ ಲಕ್ಷಣಗಳು ಕಾಣುತ್ತಿವೆ.

‘ಹಿಂದಿನ ವರ್ಷ ಇದೇ ರೀತಿ ಉತ್ತಮ ಆಸೆ ತೋರಿಸಿದ್ದ ಮಳೆ, ಹೆಸರು ಹೂವು ಬಿಡುವ ಈ ಹಂತದಲ್ಲಿ ಕೈಕೊಟ್ಟಿದ್ದರಿಂದ ಬೆಳೆ ಬಾಡಿ ಹಳದಿ ರೋಗಕ್ಕೆ ಬಲಿಯಾಯಿತು. ಸದ್ಯ ಹೆಸರು ಬೆಳೆಗೆ ಯಾವುದೇ ರೋಗವಿಲ್ಲದಿರುವುದು ಸಂತಸದ ವಿಷಯವಾಗಿದೆ’ ಎಂದು ಮಾವಿಇಟಗಿ ರೈತ ಶರಣಪ್ಪ ಗೌಡ್ರ ಹೆೇಳಿದರು.

ಮೆಣಸಗೇರಿ, ಕಡೆಕೊಪ್ಪ, ತೋಪಲಕಟ್ಟಿ, ಅಡವಿಭಾವಿ, ಹುಲಸಗೇರಿ, ಮಿಯಾಪೂರ, ಹನುಮಗಿರಿ, ಹೊಸಹಳ್ಳಿ, ಮಾವಿನಇಟಗಿ, ಜಹಗೀರಗುಡದೂರ ಭಾಗದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ಬೆಳೆಗಳ ಮಧ್ಯದಲ್ಲಿನ ಕಳೆಗಳನ್ನು ತೆಗೆಯುವುದು, ಎಡೆಗುಂಟೆ ಹೊಡೆಯುವಂತಹ ಕೆಲಸಗಳನ್ನು ರೈತರು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.