ADVERTISEMENT

ಗಂಗಾವತಿ: ಫುಟ್‌‌ಪಾತ್ ವ್ಯಾಪಾರ; ಸಂಚಾರಕ್ಕೆ ಸಂಚಕಾರ

ಅಂಗಡಿಗಳ ಹೊರ ಭಾಗಕ್ಕೆ ಚಾಚಿದ ಎಲೆಕ್ಟ್ರಿಕಲ್, ಪ್ಲಾಸ್ಟಿಕ್ ವಸ್ತುಗಳಿಂದ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 7:16 IST
Last Updated 1 ಜುಲೈ 2025, 7:16 IST
ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದ ಮುಂಭಾಗದ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನಗಳು ನಿಲ್ಲಿಸಿದ್ದರು
ಗಂಗಾವತಿ ತಾಲ್ಲೂಕು ನ್ಯಾಯಾಲಯ ಸಂಕೀರ್ಣದ ಮುಂಭಾಗದ ರಸ್ತೆಯಲ್ಲಿ ಕಾರು, ದ್ವಿಚಕ್ರ ವಾಹನಗಳು ನಿಲ್ಲಿಸಿದ್ದರು   

ಗಂಗಾವತಿ: ‘ಭತ್ತದನಾಡು’ ‘ಅಮೃತ ಸಿಟಿ’ ಎಂದೇ ಹೆಸರು ವಾಸಿಯಾದ ಗಂಗಾವತಿ ನಗರದ ವಿವಿಧ ವೃತ್ತಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಅಂಗಡಿಗಳ ಮಾಲೀಕರು, ಬೀದಿಬದಿ ವ್ಯಾಪಾರಸ್ಥರು, ದಿಚಕ್ರ ವಾಹನ ಸವಾರರು ಒತ್ತುವರಿ ಮಾಡಿಕೊಂಡಿದ್ದು, ಪಾದಚಾರಿಗಳು ಸಂಚಾರಕ್ಕೆ ನಿತ್ಯ ಸಂಕಷ್ಟ ಪ‍ಡುತ್ತಿದ್ದಾರೆ.

ಇದು ವೇಗವಾಗಿ ಬೆಳೆಯುತ್ತಿರುವ ನಗರ. ಇಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣದ ಜೊತೆ ವ್ಯಾಪಾರ- ವಹಿವಾಟು, ಜನಸಂಖ್ಯೆ ಹೆಚ್ಚಾಗುತ್ತಿದೆ ಹೊರೆತು, ಕ್ರಮಬದ್ಧ ಜೀವನ ಶೈಲಿ ಮಾತ್ರ ರೂಢಿಗೆ ಬರುತ್ತಿಲ್ಲ.

ನಗರಕ್ಕೆ ನಗರ ಸೇರಿ ವಿವಿಧ ತಾಲ್ಲೂಕುಗಳಿಂದ ವ್ಯಾಪಾರ-ವಹಿವಾಟಿಗೆ, ವಸ್ತುಗಳ ಖರೀದಿಗೆ ನಿತ್ಯ ಸಾವಿರಾರು ಸಂಖ್ಯೆಯ ಜನರು ಆಗಮಿಸುತ್ತಿದ್ದು, ಜನರ ಓಡಾಟ ಹೆಚ್ಚಾಗಿದೆ. ಜನರಿಗೆ ಅನುಕೂಲವಾಗಲೆಂದು ರಸ್ತೆ ಪಕ್ಕದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿದ್ದು, ಸದ್ಯ ಇವು ವ್ಯಾಪಾರದ ಸ್ಥಳವಾಗಿ ಮಾರ್ಪಟ್ಟಿವೆ.

ADVERTISEMENT

ನಗರದ ಇಸ್ಲಾಂಪುರ, ಮಹಾವೀರ ವೃತ್ತ, ಗಾಂಧಿವೃತ್ತ, ಗಣೇಶವೃತ್ತ, ಬಸವಣ್ಣ ವೃತ್ತ, ಜುಲಾಯಿನಗರ, ಬಂಬೂ ಬಜಾರ್, ಪಂಪಾನಗರ, ಬಿಲಾಲ್ ಮಸೀದಿ ರಸ್ತೆ, ಕನಕಗಿರಿ ರಸ್ತೆ ಸೇರಿ ವಿವಿಧ ವೃತ್ತಗಳಲ್ಲಿ ವ್ಯಾಪಾರಸ್ಥರು ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿ, ಅಂಗಡಿ ನಿರ್ಮಿಸಿಕೊಂಡಿದ್ದಾರೆ.

ಅಂಗಡಿಗಳ ಒಳಭಾಗದಲ್ಲಿ ಇರಬೇಕಾಗಿದ್ದ ಪ್ಲಾಸ್ಟಿಕ್ ವಸ್ತು, ಪಾತ್ರೆ, ದಿನಸಿ ಪದಾರ್ಥ, ಹಗ್ಗ, ಎಲೆಕ್ಟ್ರಿಕಲ್ ಸಾಮಗ್ರಿ, ಕಿರಾಣಿ ಸಾಮಾನುಗಳು ಪಾದಚಾರಿ ಮಾರ್ಗಗಳ ಮೇಲಿದ್ದು, ಜನ ಅನಿವಾರ್ಯವಾಗಿ ವಾಹನ ಸಂಚರಿಸುವ ರಸ್ತೆಗಳ ಮೇಲೆ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ತೆರವು ಮಾಡ ಬೇಕಾದ ನಗರಸಭೆ ಅಧಿಕಾರಿಗಳು ಮೌನವಹಿಸಿದ್ದು, ವ್ಯವಸ್ಥೆ ನಲುಗುತ್ತಲೇ ಸಾಗುತ್ತಿದೆ.

ಅಡ್ಡಾದಿಡ್ಡಿ ನಿಲುಗಡೆ: ಬಸ್ ನಿಲ್ದಾಣ, ಗಾಂಧಿವೃತ್ತ, ಕೋರ್ಟ್ ಮುಂಭಾಗ, ಮಹಾವೀರ ವೃತ್ತ, ಜುಲೈನಗರ, ಇಸ್ಲಾಂಪುರ ವೃತ್ತದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ಮತ್ತು ನಾಲ್ಕುಚಕ್ರದ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. ವಾಹನ ನಿಲುಗಡೆಗೆ ರಸ್ತೆಯಲ್ಲಿ ಬಿಳಿಬಣ್ಣ ಗೆರೆ ಹಾಕಿದರೂ, ಸವಾರರು ಮನಬಂದಂತೆ ವಾಹನ ನಿಲ್ಲಿಸಿ, ಸಂ‌ಚಾರಕ್ಕೆ ತೊಂದರೆ ನೀಡುತ್ತಿದ್ದಾರೆ. 

ರಸ್ತೆ ಅತಿಕ್ರಮಣ: ನಗರದ ಯಾವ ರಸ್ತೆ, ವೃತ್ತಕ್ಕೆ ಹೋದರೂ, ವಾಹನ ಸಂಚಾರದ ರಸ್ತೆಗಳಿಗೆ ತರಕಾರಿ, ಎಗ್ ರೈಸ್, ಟಿಫೀನ್, ಜ್ಯೋಗಾರ ಸಾಮಾನು, ಚಪ್ಪಲಿ, ಬಟ್ಟೆ, ಟೀ ಬಂಡಿ ವ್ಯಾಪಾರಸ್ಥರು ಬಂಡಿ ಇಟ್ಟುಕೊಂಡು ವ್ಯಾಪಾರ ಮಾಡುವುದು ಕಂಡು ಬರುತ್ತಿದೆ. ಸಂಚಾರಕ್ಕೆ ತೊಂದರೆ ಆಗಲಿದೆ ಎಂಬ ವಿಷಯ ತಿಳಿದರೂ, ಸಾಮಾಜಿಕ ಜವಾಬ್ದಾರಿ ಇಲ್ಲದೇ ವ್ಯಾಪಾರ ನಡೆಸಲಾಗುತ್ತಿದೆ. ಇದು ಸಂಚಾರಕ್ಕೆ ಸಂಚಕಾರವಾಗಿದೆ.

ಇಸ್ಲಾಂಪುರ ಬಳಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿರುವ ಕಾರು
ಮಹಾವೀರ ವೃತ್ತದ ಬಳಿನ ಪಾದಾಚಾರಿ ಮಾರ್ಗದಲ್ಲಿ ತರಕಾರಿ ಪ್ಲಾಸ್ಟಿಕ್ ಸಾಮಗ್ರಿಗಳು ಇಟ್ಟು ಸಂಚಾರಕ್ಕೆ ಆಡಿಪಡಿಸಿರುವುದು
ಮಹಾವೀರ ವೃತ್ತದ ಬಳಿ ನಡು ರಸ್ತೆಗೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳು
ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿ ಜನ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲೆ ವಾಹನ ನಿಲ್ಲಿಸುವುದರಿಂದ ನಿತ್ಯ ಸಂಚಾರ ದಟ್ಟಣೆ ಉಂಟಾಗಿ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಧಿಕಾರಿಗಳು ಕ್ರಮವಹಿಸಬೇಕು
ವೆಂಕಟೇಶ ಸೂರ್ಯನಾಯಕ ತಾಂಡ ನಿವಾಸಿ
ಸದ್ಯ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಪೂರ್ಣಗೊಂಡ ತಕ್ಷಣವೇ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ಎಲ್ಲಾ ಬೀದಿಬದಿ ವ್ಯಾಪಾರಸ್ಥರನ್ನ ಗುಂಡಮ್ಮ ಮಾರುಕಟ್ಟೆಗೆ ಸ್ಥಳಾಂತರಿಸಲಾಗುವುದು
ಆರ್.ವಿರೂಪಾಕ್ಷಮೂರ್ತಿ ಪೌರಾಯುಕ್ತರು ನಗರಸಭೆ ಗಂಗಾವತಿ

ತಲೆಕೆಡಿಸಿಕೊಳ್ಳದ ನಗರಸಭೆ‌

ಪೊಲೀಸ್ ಇಲಾಖೆ ನಗರದ ರಸ್ತೆಗಳ ಅಭಿವೃದ್ಧಿ ಭಾಗವಾಗಿ ಅಲ್ಲಲ್ಲಿ ಡಾಂಬರಿಕರಣ ಮಾಡಲಾಗುತ್ತಿದೆಯೇ ಹೊರೆತು ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವಿಗೆ ನಗರಸಭೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಅಡ್ಡಾದಿಡ್ಡಿ ವಾಹನ ನಿಲುಗಡೆ ವಿಚಾರಕ್ಕೆ ಸಂಚಾರ ಠಾಣೆ ಅಧಿಕಾರಿಗಳು ಅಗಾಗ ಕ್ರಮ ಜರುಗಿಸುತ್ತಿದ್ದರೂ ಪೂರ್ಣ ಪ್ರಮಾಣದ ನಿಯಂತ್ರಣಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪವಿದೆ. ಮನವಿಗಳಿಗೆ ಕಿವಿಕೊಡದ ಅಧಿಕಾರಿಗಳು: ನಗರದಲ್ಲಿ ಪಾದಚಾರಿ ಮತ್ತು ರಸ್ತೆ ಒತ್ತುವರಿಯಿಂದ ಹಲವು ಅಪಘಾತಗಳು ನಡೆದ ಬಗ್ಗೆ ವರದಿಗಳಾಗಿದ್ದು. ಇದನ್ನು ಪ್ರಶ್ನಿಸಿ ಹಲವು ಸಂಘಟನೆಗಳು ಬುದ್ದಿಜೀವಿಗಳು ಸಾರ್ವಜನಿಕರು ನಗರ ಸಭೆ ಸದಸ್ಯರು ಮನವಿ ಸಲ್ಲಿಸಿದ್ದೂ ಅಧಿಕಾರಿಗಳು ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಸ್ಥಳೀಯರು ವಾಹನ ಸವಾರರು ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.