ಕುಷ್ಟಗಿ: ಗದಗ ವಾಡಿ ರೈಲು ಮಾರ್ಗಕ್ಕೆ ಅಡ್ಡಲಾಗಿ ಕೊಪ್ಪಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಗೊಳ್ಳುತ್ತಿರುವ ಮೇಲ್ಸೇತುವೆ ಕಾಮಗಾರಿ ಬರುವ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೇಲ್ವೆ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ ಹೇಳಿದರು.
ಮೇಲ್ಸೇತುವೆ ಸ್ಥಳದಲ್ಲಿ ಗುರುವಾರ ಕಾಮಗಾರಿ ಸ್ಥಿತಿಗತಿ ಪರಿಶೀಲಿಸಿ ಮಾಹಿತಿ ನೀಡಿದ ಅವರು, ‘ಪಿಲ್ಲರ್‌ಗಳನ್ನು ಅಳವಡಿಸುವ ಕೆಲಸ ಪ್ರಗತಿಯಲ್ಲಿದ್ದು ತ್ವರಿತಗತಿಯಲ್ಲಿ ಹಾಗೂ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರೈಲ್ವೆ ಟ್ರ್ಯಾಕ್ ಮೇಲ್ಭಾಗದಲ್ಲಿ ಅಳವಡಿಸಬೇಕಿರುವ ವಿಶೇಷ ವಿನ್ಯಾಸಕ್ಕೆ ತಕ್ಕಂತೆ ಸ್ಟೀಲ್ ಬ್ರಿಡ್ಜ್ ಗರ್ಡರ್ ಸಿದ್ಧಪಡಿಸುವ ಕೆಲಸ ಚೆನ್ನೈನಲ್ಲಿ ನಡೆಯುತ್ತಿದೆ. ನಿರೀಕ್ಷೆಯಂತೆ ಕೆಲಸ ಮುಂದುವರಿದರೆ ನಿಗದಿತ ಅವಧಿಯಲ್ಲಿ ರಾಜ್ಯ ಹೆದ್ದಾರಿ ಮೇಲ್ಸೇತುವೆ ಪೂರ್ಣಗೊಳ್ಳುತ್ತದೆ’ ಎಂದರು.
ಕುಷ್ಟಗಿ ಭಾಗದಲ್ಲಿ ₹50 ಕೋಟಿ ವೆಚ್ಚದಲ್ಲಿ ಕಂದಕೂರು, ರಾಷ್ಟ್ರೀಯ ಹೆದ್ದಾರಿ, ಸಿಂಧನೂರು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮತ್ತು ಹೆದ್ದಾರಿ ಪಕ್ಕದಲ್ಲಿನ ಶಾಲೆ ಬಳಿ ಸೇರಿ ಒಟ್ಟು 4 ಕೆಳಸೇತುವೆಗಳು ಹಾಗೂ ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿ ಒಂದು ಮೇಲ್ಸೇತುವೆ ಕಾಮಗಾರಿ ಪ್ಯಾಕೇಜ್‌ನಲ್ಲಿ ಸೇರಿವೆ. ಮೇಲ್ಸೇತುವೆ ನಿರ್ಮಾಣದ ನಂತರ ರಸ್ತೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲಿನ ಜಮೀನನ್ನು ಬಾಡಿಗೆಗೆ ಪಡೆದು ರಾಜ್ಯ ಹೆದ್ದಾರಿಗೆ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದು ಮೇಲ್ಸೇತುವೆ ಮುಗಿದ ನಂತರ ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸುವುದಾಗಿ ಹೇಳಿದರು.
ತಾತ್ಕಾಲಿಕ ರಸ್ತೆಯಲ್ಲಿ ಅಳವಡಿಸಿರುವ ರಸ್ತೆಉಬ್ಬುಗಳು ಅವೈಜ್ಞಾನಿಕವಾಗಿದ್ದು ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಅವುಗಳನ್ನು ರ್‍ಯಾಂಪ್ ಮಾದರಿಯಲ್ಲಿ ಅಳವಡಿಸುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಅಶೋಕ ಮುದಗೌಡರ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.