ಕುಕನೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನ ಭಾನಾಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ನೆನಪುಗಳನ್ನು ಹಸಿರಾಗಿರಿಸಲು ರಾಜ್ಯ ಸರ್ಕಾರ ಅಲ್ಲಿಯೇ ಗಾಂಧಿ ಸಾಂಸ್ಕೃತಿಕ ಭವನ ನಿರ್ಮಿಸಲು ಮುಂದಾಗಿದೆ.
ಗಾಂಧೀಜಿ ಅವರು ಹರಿಜನೋದ್ಧಾರ ಕಾರ್ಯಕ್ಕಾಗಿ ದೇಶದಾದ್ಯಂತ ಪ್ರವಾಸ ಮಾಡುವಾಗ 1934ರ ಮಾರ್ಚ್ 3ರಂದು ಭಾನಾಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಅದೇ ಗ್ರಾಮದ ಆಗಿನ 9 ವರ್ಷದ ಕಲಾವಿದ ಕಾಳಪ್ಪ ಪತ್ತಾರ ಅವರು ಬಾಪೂಜಿ ಎದುರಲ್ಲೇ ಕುಳಿತು ಅವರ ಭಾವಚಿತ್ರವನ್ನು ರಚಿಸಿ ಸಮರ್ಪಿಸಿದ್ದರು. ಅದನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಗಾಂಧೀಜಿ ತಮ್ಮ ರುಜು ಮಾಡಿ ಆ ಚಿತ್ರವನ್ನು ಹರಾಜು ಹಾಕಿ ಬಂದ ಮೊತ್ತವನ್ನು ಕಾಳಪ್ಪ ಪತ್ತಾರ ಅವರ ಹೆಸರಿನಲ್ಲಿ ಹರಿಜನ ಕಲ್ಯಾಣ ನಿಧಿಗೆ ದೇಣಿಗೆಯಾಗಿ ಸ್ವೀಕರಿಸಿದರು.
ಆಗಿನ ಕಾಲದ ರೈಲುಗಳಿಗೆ ಮಾರ್ಗದ ಮಧ್ಯ ಅಲ್ಲಲ್ಲಿ ನೀರು ತುಂಬಿಸುವ ಪ್ರಕ್ರಿಯೆ ನಡೆಯುತ್ತಿತ್ತು. ನೀರು ತುಂಬಿಸಿಕೊಳ್ಳುವ ಸಲುವಾಗಿ ಭಾನಾಪುರದಲ್ಲಿ ರೈಲು ನಿಂತಾಗ ಗಾಂಧೀಜಿ ನಿಲ್ದಾಣದಲ್ಲಿ ಇಳಿದಿದ್ದರು. ಆಗ ಹೋರಾಟಗಾರರು ಮತ್ತು ದೇಶಪ್ರೇಮಿಗಳು ರೈಲು ನಿಲ್ದಾಣ ತುಂಬೆಲ್ಲಾ ಸೇರುವ ಜೊತೆಗೆ ಅಕ್ಕಪಕ್ಕದ ಮರ, ಮನೆಗಳ ಮೇಲೆಯೂ ಸಹ ಕುಳಿತು ಗಾಂಧೀಜಿ ಅವರನ್ನು ವೀಕ್ಷಿಸಿದ್ದರು ಎನ್ನುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಇಷ್ಟೊಂದು ಐತಿಹಾಸಿಕ ಮಹತ್ವ ಪಡೆದುಕೊಂಡಿರುವ ಭಾನಾಪುರದಲ್ಲಿ ₹1.15 ಕೋಟಿ ವೆಚ್ಚದಲ್ಲಿ ಗಾಂಧಿ ಸಾಂಸ್ಕೃತಿಕ ಭವನ ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರೂ ಆದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಮಂಗಳವಾರ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವರು.
ಈ ಅನುದಾನದಲ್ಲಿ ರೈಲು ನಿಲ್ದಾಣ ಮತ್ತು ಗ್ರಾಮ ಪಂಚಾಯಿತಿ ಮಧ್ಯದಲ್ಲಿ ಗಾಂಧಿ ಸಾಂಸ್ಕೃತಿಕ ಭವನ, ಗಾಂಧೀಜಿ ಕಂಚಿನ ಮೂರ್ತಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ರೈಲು ನಿಲ್ದಾಣದ ತನಕ ಕಾಯಂ ಬೆಳಕಿನ ವ್ಯವಸ್ಥೆ ಸೌಲಭ್ಯ ಕಲ್ಪಿಸಲಾಗುತ್ತಿದೆ.
ಜಿಲ್ಲೆಯ ಮಹತ್ವದ ಸ್ಥಳವಾಗಿರುವ ಕಾರಣ ಭಾನಾಪುರ ರೈಲು ನಿಲ್ದಾಣಕ್ಕೆ ಗಾಂಧೀಜಿ ಅವರ ಹೆಸರು ನಾಮಕರಣ ಮಾಡಬೇಕು ಎಂದು ಅನೇಕರು ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.
‘ಭಾನಾಪುರದಲ್ಲಿ ಗಾಂಧಿ ಸಾಂಸ್ಕೃತಿಕ ಭವನ ಹಾಗೂ ರೈಲು ನಿಲ್ದಾಣಕ್ಕೆ ಗಾಂಧೀಜಿ ಹೆಸರು ಎಂದು ನಾಮಕರಣ ಮಾಡಬೇಕೆಂದು ಗ್ರಾಮದ ಬಹುದಿನದ ಬೇಡಿಕೆಯಾಗಿತ್ತು. ಈಗ ಅದರಲ್ಲಿ ಒಂದು ಬೇಡಿಕೆ ಈಡೇರಿದೆ. ಇನ್ನೊಂದು ಬಾಕಿ ಉಳಿದಿದೆ’ ಎಂದು ಗ್ರಾಮದ ನಿವಾಸಿ ನಾಗರಾಜ್ ತಳವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.