ಕುಷ್ಟಗಿ: ‘ಯಾರು ಎಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತಾರೊ ಅಥವಾ ಇಲ್ಲವೊ ಗೊತ್ತಿಲ್ಲ, ಆದರೆ ಸಾಕಷ್ಟು ಸಂಖ್ಯೆಯ ಸಂಘಟನೆಗಳ ಹೆಸರಿನಲ್ಲಿ ವಂತಿಗೆ ನೀಡಲು ಬಲವಂತ ಮಾಡುತ್ತಿರುವುದು ಹೆಚ್ಚಾಗಿದೆ’.
ರಶೀದಿ ಪುಸ್ತಕದೊಂದಿಗೆ ಮಕ್ಕಳು ಸೇರಿದಂತೆ ಸಾಕಷ್ಟು ಜನರು ಅಂಗಡಿ ಮುಂಗಟ್ಟುಗಳಿಗೆ ಅಲೆದಾಡುತ್ತಿರುವುದರಿಂದ ರೋಸಿ ಹೋಗಿರುವ ವ್ಯಾಪಾರಿಗಳು ಮೇಲಿನಂತೆ ಹೇಳಿದ ಮಾತಿದು.
ತರಕಾರಿ, ಹಣ್ಣಿನ ವ್ಯಾಪಾರಿಗಳು, ಸೈಕಲ್ ಬಂಡಿಯಲ್ಲಿ ಉಪಹಾರದ ವ್ಯವಹಾರ ನಡೆಸುವವರಿಂದ ಹಿಡಿದು, ಕಿರಾಣಿ, ಬಟ್ಟೆ, ಸ್ಟೇಶನರಿ, ಹೋಟೆಲ್‌ಗಳು ಸೇರಿದಂತೆ ಎಲ್ಲರಿಂದಲೂ ಹಣ ಪೀಕಿಸುವ ದಂಧೆಗೆ ಇಳಿದಿರುವುದಕ್ಕೆ ಜನರಲ್ಲಿ ಬೇಸರ ಉಂಟು ಮಾಡಿದೆ. ಅಂಗಡಿಗಳು ಅಷ್ಟೇ ಅಲ್ಲದೆ ಓಣಿ ಓಣಿಗಳಲ್ಲಿಯೂ ಇದೇ ರೀತಿ ಹಣ ವಸೂಲಿ ಮಾಡಲಾಗುತ್ತಿದೆ. ಎಷ್ಟು ಜನರಿಗೆ ಕೊಡಬೇಕು?, ಪ್ರಶ್ನಿಸುವಂತೆಯೇ ಇಲ್ಲ ಎಂದೇ ಜನರು ಹೇಳಿದರು.
ಇಂತಿಷ್ಟೇ ಹಣ ಕೊಡಿ ಎಂದೆ ಕೆಲ ಸಂಘಟನೆಗಳ ಕಾರ್ಯಕರ್ತರು ತಾವೇ ರಶೀದಿಯಲ್ಲಿ ಮೊತ್ತ ನಮೂದಿಸಿ ಬೆದರಿಕೆ ಒಡ್ಡಿ ಬಲವಂತದಿಂದ ಹಣ ವಸೂಲಿ ಮಾಡುತ್ತಿದ್ದಾರೆ, ಕಡಿಮೆ ಹಣ ಕೊಡುವುದಾಗಿ ಹೇಳಿದರೆ ಮುಂದೆ ನೋಡಿಕೊಳ್ಳುತ್ತೇವೆ, ಹೇಗೆ ವ್ಯಾಪಾರ ಮಾಡುತ್ತೀರೊ ನೋಡುತ್ತೇವೆ’ ಎಂದೇ ಗದರಿಸುತ್ತಿದ್ದಾರೆ. ಬಾಯಿ ಮುಚ್ಚಿಕೊಂಡು ದುಡಿಮೆಯಿಂದ ಬಂದ ಹಣವನ್ನು ಕೊಟ್ಟು ಸಾಗ ಹಾಕುತ್ತಿದ್ದೇವೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು, ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು. ಗಣೇಶೋತ್ಸವ ಬಂದರೆ ಸಾಕು ರಶೀದಿ ಪುಸ್ತಕಗಳೊಂದಿಗೆ ಸಂಘಟನೆಗಳ ಮುಖಂಡರು, ಸಣ್ಣಪುಟ್ಟ ಕಾರ್ಯಕರ್ತರು ಹಾಜರಾಗುತ್ತಾರೆ. ಹಣ ಕೊಡಿ, ಇಲ್ಲವೆ ಪ್ರಸಾದ ವ್ಯವಸ್ಥೆಗೆ ಚೀಲಗಟ್ಟಲೇ ಅಕ್ಕಿ ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಪ್ರಮುಖ ರಸ್ತೆಗಳಲ್ಲಿ ಹಗ್ಗ ಹಿಡಿದು ಅಡ್ಡಗಟ್ಟಿ ವಾಹನ ಸವಾರರಿಂದ ಹಣ ವಸೂಲು ಮಾಡುತ್ತಿದ್ದಾರೆ. ಸಂಗ್ರಹಿಸಿದ ಹಣದಲ್ಲಿ ಇವರು ಖರ್ಚು ಮಾಡಿದ ಹಣ ಎಷ್ಟು ಎಂಬುದನ್ನು ಯಾರು ಕೇಳಬೇಕು?. ಜನರ ಹಣದಲ್ಲಿ ಮಜಾ ಉಡಾಯಿಸುವವರೇ ಹೆಚ್ಚಾಗಿದ್ದಾರೆ, ಯಾರದೋ ಭಕ್ತಿಸೇವೆ, ಇನ್ನಾರದೊ ಚಪಲ ಎಂಬಂತಾಗಿದೆ ಎಂದು ಜನರು ‘ಪ್ರಜಾವಾಣಿ’ ಬಳಿ ಆರೋಪಿಸಿದರು.
ಜನರಿಂದ ಹಣ ವಸೂಲಿ ಬಗ್ಗೆ ಯಾರೂ ಮಾಹಿತಿ ನೀಡಿಲ್ಲ ಗೊತ್ತಾರೆ ಕಠಿಣ ಕ್ರಮ ಜರುಗಿಸುತ್ತೇವೆ. ಅಲ್ಲದೆ ಪೊಲೀಸ್ ಗಸ್ತು ಹೆಚ್ಚಿಸುತ್ತೇವೆಯಶವಂತ ಬಿಸನಳ್ಳಿ ಸಿಪಿಐ
ಜಿಲ್ಲೆಯಾದ್ಯಂತ ಸಿಸಿ ಟಿವಿ ಕಣ್ಗಾವಲು
ಕುಷ್ಟಗಿ: ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಏಕ ಕಾಲದಲ್ಲಿ ನಡೆಯುತ್ತಿರುವ ಕಾರಣಕ್ಕೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆಯ ಮೇಲೆ ನಿಗಾ ಇರಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಮುಂದಾಗಿರುವ ಜಿಲ್ಲಾಡಳಿ ಮತ್ತು ಪೊಲೀಸ್ ಇಲಾಖೆ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 800 ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿಡಲು ಮುಂದಾಗಿದೆ. ಆ.27 ರಿಂದ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಅತಿ ಹೆಚ್ಚು ಅಂದರೆ 289 ಸಿಸಿಟಿವಿ ಕ್ಯಾಮೆರಾಗಳು ಗಂಗಾವತಿ ನಗರ ಮತ್ತು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿರಲಿವೆ. ಕೊಪ್ಪಳ ನಗರ ವ್ಯಾಪ್ತಿಯಲ್ಲಿ 138 ಕೊಪ್ಪಳ ಗ್ರಾಮೀಣ 23 ಮುನಿರಾಬಾದ್ ಠಾಣೆ ವ್ಯಾಪ್ತಿಯಲ್ಲಿ 31 ಅಳವಂಡಿ 4 ಕುಕನೂರು 30 ಯಲಬುರ್ಗಾ 29 ಬೇವೂರು 14 ಗಂಗಾವತಿ ನಗರ ಠಾಣೆ ವ್ಯಾಪ್ತಿ 200 ಗಂಗಾವತಿ ಗ್ರಾಮೀಣ 80 ಕಾರಟಗಿ 16 ಕನಕಗಿರಿ 89 ಕುಷ್ಟಗಿ 17 ಹನುಮಸಾಗರ ಹಾಗೂ ತಾವರಗೇರಾ ಠಾಣೆ ವ್ಯಾಪ್ತಿಯಲ್ಲಿ ತಲಾ 29 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.