ಗಂಗಾವತಿ: ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಪಿಡಿಒ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕ ಹಾಗೂ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರು ಶನಿವಾರ ತಾ.ಪಂ.ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ ಕುರಡಿ ಮಾತನಾಡಿ, ಹಿರೇಮ್ಯಾಗೇರಿ ಗ್ರಾಮ ಪಂಚಾಯಿತಿ ಮಹಿಳಾ ಪಿಡಿಒ ರತ್ನಮ್ಮ ಗುಂಡಣ್ಣನವರ ಅವರ ಮೇಲೆ ಅದೇ ಗ್ರಾ.ಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ ಮತ್ತು ಅವರ ಮಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಪಿಡಿಓಗಳ ಆತ್ಮಸ್ಥೈರ್ಯ ಕುಗ್ಗಿ ಹೋಗಿದ್ದು, ಕಚೇರಿ ಸಮಯದಲ್ಲಿ ಪಿಡಿಒಗಳು, ಸಿಬ್ಬಂದಿಗೆ ಸೂಕ್ತ ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. ಹಲ್ಲೆ ಮಾಡಿದ ಗ್ರಾ.ಪಂ ಸದಸ್ಯೆಯ ಸದಸ್ಯತ್ವ ರದ್ದುಗೊಳಿಸಬೇಕು. ಇತರೆ ವ್ಯಕ್ತಿ ವಿರುದ್ಧ ರೌಡಿಶೀಟರ್ ತೆರೆಯಬೇಕು. ಸಂತ್ರಸ್ತ ಪಿಡಿಒ ವಿರುದ್ಧ ಪ್ರತಿ ದೂರು ದಾಖಲಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಪಿಡಿಒಗಳಾದ ಸುರೇಶ ಚಲವಾದಿ, ಶಂಷೀರ್ ಅಲಿ, ವಿದ್ಯಾವತಿ, ಇಂದಿರಾ, ವತ್ಸಲಾ, ಕಾರ್ಯದರ್ಶಿ ರವಿ ಶಾಸ್ತ್ರಿ, ರವೀಂದ್ರ ಕುಲಕರ್ಣಿ, ಈಶಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಖಜಾಂಚಿ ಶ್ರೀನಿವಾಸ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಪ್ರಶಾಂತ, ತಾ.ಪಂ ಸಿಬ್ಬಂದಿ ಶಿವಮೂರ್ತಿ ಹಿರೇಮಠ, ಹನುಮೇಶ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.