ADVERTISEMENT

ಗಂಗಾವತಿ: ವಿದೇಶಿ ಪ್ರವಾಸಿಗರು ಸೇರಿ ಐವರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 2:57 IST
Last Updated 7 ಮಾರ್ಚ್ 2025, 2:57 IST
<div class="paragraphs"><p>ಹಲ್ಲೆ</p></div>

ಹಲ್ಲೆ

   

(ಪ್ರಾತಿನಿಧಿಕ ಚಿತ್ರ)

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ತೆರಳುವ ಮಾರ್ಗದಲ್ಲಿ ತುಂಗಾಭದ್ರ ಎಡದಂಡೆ ಕಾಲುವೆ ಪಕ್ಕ ಗಿಟಾರ್ ಬಾರಿಸುತ್ತ ಕುಳಿತಿದ್ದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಗುರುವಾರ ತಡರಾತ್ರಿ ಹಲ್ಲೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಅಮೆರಿಕ, ಇಸ್ರೇಲ್‌ನ ತಲಾ ಒಬ್ಬರು, ಗಂಗಾವತಿ ತಾಲ್ಲೂಕಿನ ಆನೆಗೊಂದಿಯ ಹಾರ್ಟ್ ಲೈನ್ ಹೋಂ ಸ್ಟೇ ಮಾಲೀಕರಾದ ಅಂಬಿಕಾ ಪರಮೇಶ ನಾಯ್ಕ, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮಹಾರಾಷ್ಟ್ರದ ನಾಸಿಕ್ ನ ಪಂಕಜ್ ಪಟೇಲ ಹಾಗೂ ಒಡಿಶಾದ ಬಿಬಾಸ್ ಹಲ್ಲೆಗೆ ಒಳಗಾದವರು. ಇದರಲ್ಲಿ ನಾಲ್ಕು ಜನರನ್ನು ಚಿಕಿತ್ಸೆಗಾಗಿ ಗಂಗಾವತಿ ಉಪವಿಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಒಳಗಾದ ಒಡಿಶಾದ ಪ್ರವಾಸಿಗ ಎಲ್ಲಿದ್ದಾನೆ ಎನ್ನುವುದು ಗೊತ್ತಾಗಿಲ್ಲ.

ಆಗಿದ್ದೇನು: ಪ್ರವಾಸಿಗರು ಗಿಟಾರ್‌ ಬಾರಿಸುತ್ತ ಕುಳಿತಿದ್ದಾಗ ಬೈಕ್‌ ಮೇಲೆ ಬಂದ ಮೂವರು ದುಷ್ಕರ್ಮಿಗಳು ಜಗಳ ತೆಗೆದಿದ್ದು ಮಾತಿಗೆ ಮಾತು ಬೆಳೆದಿದೆ. ಬಳಿಕ ಅದು ಹಲ್ಲೆ ಮಾಡುವ ಹಂತಕ್ಕೆ ಹೋಗಿದೆ. ಯಾವ ಕಾರಣಕ್ಕಾಗಿ ಜಗಳವಾಗಿದೆ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ಘಟನಾ ಸ್ಥಳಕ್ಕೆ ತಡರಾತ್ರಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗಂಗಾವತಿ ಗ್ರಾಮೀಣ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಸೋಮಶೇಖರ ಜುತ್ತಲ್ ಭೇಟಿ ನೀಡಿ ಪರಿಶೀಲಿಸಿದರು.

ಶುಕ್ರವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ನಗರಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಪ್ರಕಾಶ ಮಾಳೆ, ಶ್ವಾನದಳ ಬಂದಿದ್ದು ತಪಾಸಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನ, ಹ್ಯಾಂಡ್ ಬ್ಯಾಗ್‌ ಲಭಿಸಿವೆ. ಹ್ಯಾಂಡ್‌ಬ್ಯಾಗ್‌ನಲ್ಲಿ ಕ್ಯಾಮೆರಾ, ಪವರ್‌ ಬ್ಯಾಂಕ್‌, ಪೆನ್ನು, ಮುರಿದು ಬಿದ್ದ ಗಿಟಾರ್‌, ಕೈ ವಸ್ತ್ರ, ಸಿಗರೇಟ್‌, ರಕ್ತದ ಕಲೆ ಇರುವ ಬಟ್ಟೆ ಲಭ್ಯವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.