ADVERTISEMENT

ಗಂಗಾವತಿ: ಸಂಭ್ರಮದ ಚನ್ನಬಸವ ತಾತನ ಜೋಡು ರಥೋತ್ಸವ

ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:13 IST
Last Updated 2 ಜನವರಿ 2026, 6:13 IST
<div class="paragraphs"><p>ಗಂಗಾವತಿ ನಗರದಲ್ಲಿ ಚನ್ನಬಸವ ತಾತನ 80ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಡೆದ ಜೋಡಿ ರಥೋತ್ಸ ವದಲ್ಲಿ ನಡೆದಿರುವ ಭಕ್ತರು.</p></div>

ಗಂಗಾವತಿ ನಗರದಲ್ಲಿ ಚನ್ನಬಸವ ತಾತನ 80ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ನಡೆದ ಜೋಡಿ ರಥೋತ್ಸ ವದಲ್ಲಿ ನಡೆದಿರುವ ಭಕ್ತರು.

   

ಗಂಗಾವತಿ: ಭತ್ತದ ನಾಡಿನ ಕಾಯಕಯೋಗಿ, ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚನ್ನಬಸವ ತಾತ ನವರ ಜೋಡು ರಥೋತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.

ತಾತನ ಮಠದಿಂದ ಸಕಲವಾದ್ಯಗಳೊಂದಿಗೆ ಆರಂಭಗೊಂಡ ಜೋಡು ರಥೋತ್ಸವ ರಾಜ ಬೀದಿಯಾದ ಗಣೇಶ ವೃತ್ತ ದಿಂದ, ಗಾಂಧಿವೃತ್ತದ ಮೂಲಕ ಸಾಗಿ, ಬಸವಣ್ಣ ವೃತ್ತ ದಲ್ಲಿರುವ ಪಾದಕಟ್ಟೆ ತಲುಪಿ ಮತ್ತೆ ವಾಪಸ್ ಶ್ರೀಮಠಕ್ಕೆ ಬಂದು ತಲುಪಿತು.

ADVERTISEMENT

ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮೇಲೆ ಸಾವಿರಾರು ಸಂಖ್ಯೆಯ ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ಸಂಜೆ ಜೋಡು ರಥೋತ್ಸವ ಸಾಗುತ್ತಿದ್ದಾಗ ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು,ಹಿರಿಯರು ಬಾಳೆಹಣ್ಣು, ಉತ್ತತ್ತಿ, ಹೂವು ಎರಚಿ ಗೌರವ ಸಲ್ಲಿಸಿದರು.

ತಾತನ ಜಾತ್ರೆಯ ರಥೋತ್ಸವ ಕಣ್ತುಂಬಿಕೊಳ್ಳಲು ಕುಟುಂಬದ ಸದಸ್ಯರ ಸಮೇತ ಕಾರಟಗಿ, ಕನಕಗಿರಿ, ಶ್ರೀರಾಮ ನಗರ, ಹುಲಗಿ ಸೇರಿ ಗಂಗಾವತಿ ತಾಲ್ಲೂಕು ಸುತ್ತಮುತ್ತಲಿನ ಎಲ್ಲ ಗ್ರಾಮಗಳಿಂದ ಭಕ್ತರು ತಂಡೋಪತಂಡವಾಗಿ ಹರಿದು ಬಂದಿದ್ದರು.

ಬೆಳಿಗ್ಗೆ 5 ಗಂಟೆಯಿಂದಲೇ ಹಣವಾಳ, ದಾಸನಾಳ, ಕೆಸರ ಹಟ್ಟಿ, ವಡ್ಡರಹಟ್ಟಿ, ಹೇರೂರು, ಢಣಾಪುರ, ಶರಣಬಸವೇಶ್ವರ ಕ್ಯಾಂಪ್, ಬಸಾಪಟ್ಟಣ, ಆರ್ಹಾಳ, ಸಿಂಗನಾಳ ಸೇ ರಿ ವಿವಿಧ ಗ್ರಾಮಗಳಿಂದ ಭಕ್ತರು ಕಾಲ್ನಡಿಗೆಯ ಮೂಲಕ ಶ್ರೀಮಠಕ್ಕೆ ಆಗಮಿಸಿ, ಚನ್ನಬಸವ ತಾತನ ಜೊತೆಗೆ ಗದ್ದುಗೆ ದರ್ಶನ ಪಡೆದರು.

ಬೆಳಿಗ್ಗೆ ಚನ್ನಬಸವ ತಾತನ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಭಿಷೇಕ, ಅಷ್ಟೋತ್ತರ ಪಾರಾಯಣ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಪಟ ಏರಿಸಿ, ಮಡಿರಥ ಎಳೆಯಲಾಯಿತು.

ಇನ್ನೂ ಜಾತ್ರೆ ಮತ್ತು ರಥೋತ್ಸವ ನಿಮಿತ್ತ ಚನ್ನಬಸವ ತಾತನ ದೇವಸ್ಥಾನವನ್ನು ಬಾಳೆದಿಂಡು, ಹೂವಿನ ತೋರಣ, ತೆಂಗಿನಗ‌ರಿ,ಪೆಂಡಲ್ ಹಾಕಿ ವಿದ್ಯುತ್ ಅಲಂಕಾರದಿಂದ ಸಿಂಗರಿಸಿದರೇ, ತಾತನ ಗದ್ದುಗೆ ಮತ್ತು ಮೂರ್ತಿಯನ್ನು ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಿದ ದೃಶ್ಯಗಳು ಕಂಡು ಬಂದವು.

ಮಹಿಳೆಯರು ಕುಟುಂಬಸ್ಥರ ಸಮೇತ ನೂತನ ವಸ್ತ್ರಗಳನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿ ಸರತಿಯಲ್ಲಿ ನಿಂತು, ತಾತನ ಆಶೀರ್ವಾದ ಪಡೆದು, ಹೂವು, ಕರ್ಪೂರ ಸೇರಿ ತೆಂಗಿನಕಾಯಿ ಸಮರ್ಪಿಸಿದರು. ನಂತರ ಮಕ್ಕಳೊಂದಿಗೆ ಜಾತ್ರೆಯಲ್ಲಿನ ಕಿವಿಯೋಲೆ, ಬಳೆ, ಕುಂಕುಮ, ಮಕ್ಕಳ ಆಟದ ಸಾಮಾನು ಸೇರಿ ವಿವಿಧ ಜ್ಯೋಗ್ಯಾರ ವಸ್ತುಗಳು ಖರೀದಿಸಿದರು.

ದಾಸೋಹ ವ್ಯವಸ್ಥೆ: ಚನ್ನಬಸವ ತಾತನ ಜಾತ್ರೆಗೆ ಆಗಮಿಸಿದ ಭಕ್ತರಿಗೆ ಚನ್ನಬಸವ ಕಲ್ಯಾಣ ಮಂಟಪದಲ್ಲಿ (ಮಹಿಳೆಯರಿಗೆ) ಹಾಗೂ ಆವರಣದಲ್ಲಿ (ಪುರುಷರಿಗೆ) ಸಿಹಿ (ಬೂಂದಿ), ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ, ಸಾಂಬಾರಿ‌ನ ಊಟದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ವರಸಿದ್ಧಿ ಆಸ್ಪತ್ರೆಯವರು ಉಚಿತ ಮಜ್ಜಿಗೆ ಸೇವೆ ನೀಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ದೇವಸ್ಥಾನ ಸಮಿತಿ ಸದಸ್ಯರು ದಾಸೋಹ ಮಾಡಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಚನ್ನಬಸವ ತಾತನ ಜಾತ್ರೆಯ ನಿಮಿತ್ತ ನಗರದಲ್ಲಿ ಸಂಚಾರದಟ್ಟ ಉಂಟಾಗದಂತೆ ಪೊಲೀಸ್ ಇಲಾಖೆ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಿ, ಅಗತ್ಯ ಬಂದೋಬಸ್ ಕಲ್ಪಿಸಲಾಗಿತ್ತು. ಬೆಳಿಗ್ಗೆ ಯಿಂದಲೇ ಪೊಲೀಸರು ಗಣೇಶ,ಗಾಂಧಿ, ನೀಲಕಂಠೇಶ್ವರ, ಜುಲಾಯಿನಗರ, ಕೃಷ್ಣದೇವರಾಯ ವೃತ್ತದ ಬಳಿ ಬ್ಯಾರಿಕೆಡ್ ಅಳವಡಿಸಿ, ಮಠದ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡದೆ, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು.

ನಗರಸಭೆ ಸದಸ್ಯರಾದ ವಾಸುದೇವ ನವಲಿ, ಜಿ.ಪಂ ಮಾಜಿ ಸದಸ್ಯ ಅಮರೇಶ ಗೋನಾಳ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.