ಪ್ರಜಾವಾಣಿ ವಾರ್ತೆ
ಕೊಪ್ಪಳ: ಜರ್ಮನಿಯ ಲಿಂಡೌನಲ್ಲಿ ಭಾನುವಾರ ಆರಂಭವಾಗಿರುವ ನೋಬೆಲ್ ಪ್ರಶಸ್ತಿ ಪಡೆದ ರಸಾಯನಶಾಸ್ತ್ರದ ದಿಗ್ಗಜ ವಿಜ್ಞಾನಿಗಳ ದುಂಡು ಮೇಜಿನ ಪರಿಷತ್ತಿನ ಸಭೆಗೆ ಯುವ ವಿಜ್ಞಾನಿ ಗಂಗಾವತಿಯ ನಸೀಮ್ ಕೌಸರ್ ಆಯ್ಕೆಯಾಗಿದ್ದಾರೆ. ಜುಲೈ 4ರ ತನಕ ಸಭೆ ನಡೆಯಲಿದೆ.
ನಸೀಮ್ ಕೌಸರ್ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕಿ ಅತಿಥಿ ಉಪನ್ಯಾಸಕಿಯಾಗಿದ್ದಾರೆ. ಇವರು ಗಂಗಾವತಿಯ ಉರ್ದು ಹೈಸ್ಕೂಲಿನ ಮುಖ್ಯೋಪಧ್ಯಾಯ ಎಂ.ಬಿ. ಕೊಪ್ಪಳ ಹಾಗೂ ಸೂಫಿಯಾ ಬೇಗಂ ದಂಪತಿಯ ಪುತ್ರಿ.
ಪ್ರತಿವರ್ಷ ಜರುಗುವ ಲಿಂಡೌ ಜಾಗತಿಕ ಸಭೆಯಲ್ಲಿ ವಿಶ್ವದ ಆಯ್ದ 600 ಯುವ ವಿಜ್ಞಾನಿಗಳನ್ನು ಆಹ್ವಾನಿಸಿ ನೊಬೆಲ್ ಪ್ರಶಸ್ತಿ ಪುರಸ್ಕೃತ ದಿಗ್ಗಜರೊಂದಿಗೆ ಚರ್ಚಾಕೂಟ, ದುಂಡು ಮೇಜಿನ ಪರಿಷತ್ತುಗಳನ್ನು ನಡೆಸಲಾಗುತ್ತದೆ. ಈ ಸಲದ 74ನೇ ಸಮ್ಮೇಳನ ರಸಾಯನಶಾಸ್ತ್ರ ವಿಷಯಕ್ಕೆ ಮೀಸಲಿಟ್ಟಿದ್ದು, ಭಾರತದಿಂದ 29 ಯುವ ವಿಜ್ಞಾನಿಗಳು ತೆರಳಿದ್ದಾರೆ. ಆಯ್ಕೆಗೊಂಡಿರುವ ವಿದ್ಯಾರ್ಥಿಗಳ ಪ್ರವಾಸ, ಇನ್ನಿತರ ಖರ್ಚುಗಳನ್ನು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ನಿಭಾಯಿಸಲಿದೆ.
‘ಜಾಗತಿಕ ಮಟ್ಟದ ದುಂಡು ಮೇಜಿನ ಪರಿಷತ್ತಿನ ಮಗಳು ಆಯ್ಕೆಯಾಗಿದ್ದು ಅತ್ಯಂತ ಖುಷಿಯಾಗಿದೆ. ಮಗಳ ಇನ್ನಷ್ಟು ಸಾಧನೆಗೂ ಇದು ಪ್ರೇರಣೆಯಾಗಲಿದೆ’ ಎಂದು ಎಂ.ಬಿ. ಕೊಪ್ಪಳ ಖುಷಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.