ಗಂಗಾವತಿ: ಇಲ್ಲಿನ ಗಾಂಧಿ ವೃತ್ತದಲ್ಲಿ ಶುಕ್ರವಾರ ರಾತ್ರಿ 2 ಗಂಟೆ ವೇಳೆ ಪೊಲೀಸ್ ಅಧಿಕಾರಿಗಳು ಗಣೇಶ ಮೂರ್ತಿಗಳ ವಿಸರ್ಜನೆಯ ಡಿಜೆ ಬಂದ್ ಮಾಡಿಸಲು ಮುಂದಾದಾಗ ಯುವಕರು ಪ್ರತಿಭಟನೆ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಛಲವಾದಿ ಓಣಿ ಯುವಕ ಮಂಡಳಿಯವರು ಗಣೇಶ ಮೂರ್ತಿಯನ್ನು ಮೆರವಣಿಗೆ ಗಾಂಧಿ ವೃತ್ತಕ್ಕೆ ಆಗಮಿಸುವ ವೇಳೆಗಾಗಲೇ ರಾತ್ರಿ 2 ಗಂಟೆ ಆಗಿತ್ತು. ಹೀಗಾಗಿ ಪೊಲೀಸ್ ಡಿಜಿ ಬಂದ್ ಮಾಡಿ ಮೆರವಣಿಗೆ ಮುಂದುವರಿಸಿ ಎಂದು ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ಯುವಕರು ಡಿಜೆ ಹಾಕಿ ಡ್ಯಾನ್ಸ್ ಮಾಡಲು ಮುಂದಾಗಿದ್ದಾರೆ. ಬಳಿಕ ಒತ್ತಾಯದಿಂದ ಪೊಲೀಸರು ಡಿಜೆ ಬಂದ್ ಮಾಡಿಸಿದ್ದರಿಂದ ಯುವಕರು ಪ್ರತಿಭಟನೆ ನಡೆಸಿದರು.
ಪೊಲೀಸರ ವರ್ತನೆ ಖಂಡಿಸಿ ‘ದಲಿತರ ಗಣೇಶ ಹಬ್ಬ ಆಚರಣೆಗೆ ಪೊಲೀಸರಿಂದ ವಿರೋಧ’ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಅಧಿಕಾರಿಗಳು ಮನವೊಲಿಸಲು ಮುಂದಾದರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನೆ ಚದುರಿಸಿದರು.
ದಲಿತ ಯುವಕ ಸಂಘದವರು ಡಿಜೆ ಬಂದ್ ಮಾಡಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿಕೊಂಡು ಡಿಜೆ ಹಾಕುವವರೆಗೂ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸ್ ಇಲಾಖೆ ಅಧಿಕಾರಿಗಳು ಮನವೊಲಿಸಿ ಡಿಜೆ ಬಂದ್ ಮಾಡಿ ವಿಸರ್ಜನೆಗೆ ಕಳುಹಿಸಿದರು.
ಸ್ಥಳದಲ್ಲಿ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.