ADVERTISEMENT

ಗಂಗಾವತಿಯಲ್ಲಿ ಧಾರಾಕಾರ ಮಳೆ: ಸಂಚಾರಕ್ಕೆ ತೊಂದರೆ

ಚಂದ್ರಹಾಸ ಚಿತ್ರಮಂದಿರ ಬಳಿಯ ಸೇತುವೆ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:23 IST
Last Updated 12 ಸೆಪ್ಟೆಂಬರ್ 2025, 6:23 IST
ಗಂಗಾವತಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಚಂದ್ರಹಾಸ ಚಿತ್ರಮಂದಿರ ಬಳಿಯ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿರುವುದು
ಗಂಗಾವತಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಚಂದ್ರಹಾಸ ಚಿತ್ರಮಂದಿರ ಬಳಿಯ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿರುವುದು   

ಗಂಗಾವತಿ: ನಗರದಲ್ಲಿ ಬುಧವಾರ ರಾತ್ರಿ ಧಾರಕಾರ ಮಳೆ ಸುರಿದಿದ್ದು, ಚರಂಡಿಗಳು ತುಂಬಿ ಹರಿದು, ಜನಜೀವನ ಅಸ್ತವ್ಯಸ್ಥವಾಗಿದೆ.

ನಗರದ ಚಂದ್ರಹಾಸ ಚಿತ್ರಮಂದಿರ ಬಳಿಯ ಸೇತುವೆ ಕೊಚ್ಚಿ ಹೋಗಿದೆ. ಮಧ್ಯರಾತ್ರಿಯಿಂದ ಆರಂಭವಾದ ಮಳೆ ಬೆಳಿಗ್ಗೆವರೆಗೆ ಸುರಿಯಿತು.

ನಗರದ ಗುಡ್ಡದ ಕ್ಯಾಂಪ್, ಮುಜಾವರ್ ಕ್ಯಾಂಪ್, ಎಚ್‌ಆರ್‌ಎಸ್ ಕಾಲೊನಿ, ಮಹೆಬೂಬ್‌ನಗರ, ಕಿಲ್ಲಾ ಏರಿಯಾ, ಗುಂಡಮ್ಮ ಕ್ಯಾಂಪ್ ಬಳಿ ಗುಡಿಸಲುಗಳಿಗೆ ನೀರು ನುಗ್ಗಿದ್ದು, ಚಂದ್ರಹಾಸ ಚಿತ್ರಮಂದಿರ ಬಳಿಯ ಸಂಪರ್ಕದ ರಸ್ತೆ ಸಂಪೂರ್ಣ ಜಲಾವೃತವಾಗಿದೆ.

ADVERTISEMENT

ಬೆಟ್ಟದ ನೀರು ಚರಂಡಿಗೆ ಹರಿದು ಬಂದ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಚರಂಡಿ ನೀರು ನಿಂತು, ಸಂಚಾರಕ್ಕೆ ತೊಂದರೆಯಾಗಿತ್ತು. ಮಲ್ಲಾಪುರ, ರಾಂಪುರ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ್ದು, ಅಲ್ಲಿನ ಬೆಟ್ಟದ ನೀರು ಎಡದಂಡೆ ಕಾಲುವೆಗೆ ಹರಿದಿದೆ. ಕಾಲುವೆ ಮೇಲ್ಭಾಗದಿಂದ ನೀರು ಹರಿಯುತ್ತಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಕೇಪ್ ಗೇಟ್ ತೆರೆದು ದುರ್ಗಮ್ಮನ ಹ‌‌ಳ್ಳಕ್ಕೆ ನೀರು ಬಿಟ್ಟಿದ್ದು, ಜಯನಗರ ಬೈಪಾಸ್ ಬಳಿಯ ವಿತರಣೆ ಕಾಲುವೆ ತುಂಬಿ ಹರಿದಿದೆ.

ಗಂಗಾವತಿ ನಗರದ ಬಹುತೇಕ ಪ್ರದೇಶದಲ್ಲಿ ಮಳೆ ನೀರು ಚರಂಡಿಯ ಹರಿದ ಪರಿಣಾಮ ಪ್ಲಾಸ್ಟಿಕ್ ಸೇರಿ ಇತರೆ ತ್ಯಾಜ್ಯಗಳ ನಿರ್ವಹಣೆಗೆ ನಗರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಆರೋಗ್ಯ ನಿರೀಕ್ಷಕ ನಾಗರಾಜ್ ನೇತೃತ್ವ ಪೌರ ಕಾರ್ಮಿಕರ ತಂಡ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ್ದು, ತ್ಯಾಜ್ಯ ತೆಗೆದು ಹಾಕಿದ್ದರಿಂದ ರಸ್ತೆ ಸಂಚಾರ ಸುಗಮವಾಯಿತು. ಯಾವುದೇ ಅಹಿತಕರ ಘಟನೆ ಜರುಗಿದ ಬಗ್ಗೆ ವರದಿಯಾಗಿಲ್ಲ. ಮಳೆಯಿಂದ ದಿನವಿಡಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನ ಸಮಸ್ಯೆ ಅನುಭವಿಸಿದರು.

ಗಂಗಾವತಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ವಿತರಣೆ ಕಾಲುವೆ ತುಂಬಿ ಹರಿದಿದ್ದು ಚಂದ್ರಹಾಸ ಚಿತ್ರಮಂದಿರ ಬಳಿಯ ಸೇತುವೆ ಕೊಚ್ಚಿ ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.