ADVERTISEMENT

ತ್ಯಾಗ, ಬಲಿದಾನ ಪ್ರತೀಕ ಬಕ್ರೀದ್

ಗಂಗಾವತಿ: ಮಸೀದಿ, ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 15:46 IST
Last Updated 17 ಜೂನ್ 2024, 15:46 IST
ಗಂಗಾವತಿ ಜಯನಗರದ ಈದ್ಗಾ ಮಸೀದಿ ಮೈದಾನದಲ್ಲಿ ಸೋಮವಾರ ನಡೆದ ಬಕ್ರೀದ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು
ಗಂಗಾವತಿ ಜಯನಗರದ ಈದ್ಗಾ ಮಸೀದಿ ಮೈದಾನದಲ್ಲಿ ಸೋಮವಾರ ನಡೆದ ಬಕ್ರೀದ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು   

ಗಂಗಾವತಿ: ನಗರದ ಈದ್ಗಾ ಮಸೀದಿ ಮೈದಾನ, ಜಾಮಿಯಾ ಮಸೀದಿ, ಮಹ್ಮದಿಯಾ ನೂರಾನಿ ಮಸೀದಿ, ಬಿಲಾಲ್ ಮಸೀದಿಗಳಲ್ಲಿ ಸೋಮವಾರ ಮುಸ್ಲಿಮರು ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್‌ ಹಬ್ಬವನ್ನು ಭಕ್ತಿಯಿಂದ ಆಚರಿಸಿದರು.

ಬೆಳಿಗ್ಗೆ 9 ಗಂಟೆಗೆ ಜಯನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ನಡೆಸಿದರು. ಪ್ರಾರ್ಥನೆಯಲ್ಲಿ ಯುವಕರು, ಚಿಣ್ಣರು, ವೃದ್ಧರು ಸೇರಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕೆಲವರಿಗೆ ಮೈದಾನದಲ್ಲಿ ನಮಾಜ್ ಮಾಡ‌ಲು ಸ್ಥಳದ ಅಭಾವ ಎದುರಾದ ಕಾರಣ ಮಸೀದಿ ಬಳಿಯ ಸಾರ್ವಜನಿಕ ರಸ್ತೆ ಪಕ್ಕ ಚಾಪೆ, ಚಾದರ ಹಾಸಿಕೊಂಡು ಪ್ರಾರ್ಥನೆ ಸಲ್ಲಿಸಿದರು.

ಪ್ರವಾದಿ ಇಬ್ರಾಹಿಂ ಅವರ ತ್ಯಾಗ ನೆನಪಿಸುವುದೇ ಈ ಬಕ್ರೀದ್ ಹಬ್ಬವಾಗಿದ್ದು, ಮಕ್ಕಳು, ಹಿರಿಯರು, ಮಹಿಳೆಯರು ಹೊಸ ಉಡುಪುಗಳನ್ನು ಧರಿಸಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಮಸೀದಿ ಹೊರಗೆ ನಿಂತಿದ್ದ ಬಡವರಿಗೆ, ನಿಗರ್ತಿಕರಿಗೆ, ಮಹಿಳೆಯರಿಗೆ ಹಣ, ಆಹಾರ ಪದಾರ್ಥಗಳನ್ನು ದಾನ ಮಾಡಿದರು.

ಮನೆಗಳಲ್ಲಿ ಹಬ್ಬದ ವಿಶೇಷವಾಗಿ ಸಿಹಿ ಖಾದ್ಯ, ಮಾಂಸದ ಅಡುಗೆ ಸಿದ್ಧಪಡಿಸಿ, ಗೆಳೆಯರು, ಬಂಧುಗಳು, ನೆರೆ-ಹೊರೆಯವರನ್ನು ಮನೆಗೆ ಆಹ್ವಾನಿಸಿ ಊಟ ಬಡಿಸಿ, ಸಂಭ್ರಮಿಸಿದರು.

ಶಾಸಕ ಭಾಗಿ, ಮಾಜಿ ಸಚಿವ ಗೈರು: ಜಯನಗರ ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಭಾಗವಹಿಸಿ, ಪ್ರಾರ್ಥಿಸಿದರು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗೈರಾಗಿದ್ದರು. ಪ್ರಾರ್ಥನೆ ಮುಗಿದ ನಂತರ ಶಾಸಕರು ಮುಸ್ಲಿಂ ಬಾಂಧವರನ್ನು ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು.

ಮುಸ್ಲಿಂ ಧರ್ಮಗುರುಗಳು ಹಬ್ಬದ ದೈವ ಸಂದೇಶ ಮುಕ್ತಾಯದ ನಂತರ ಶಾಸಕರ ಪರವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಎಲ್ಲರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್: ನಗರದ ಮಸೀದಿಗಳಲ್ಲಿ ನಮಾಜ್ ಮಾಡಲು ತೆರಳುವ ಮುಸ್ಲಿಮರಿಗೆ ತೊಂದರೆ ಆಗದಂತೆ, ಈಚೆಗೆ ಬಕ್ರೀದ್ ಶಾಂತಿ ಸಭೆಯಲ್ಲಿ ನಡೆದ ರೆಡ್ಡಿ ಮತ್ತು ಅನ್ಸಾರಿ ಬೆಂಬಲಿಗರ ನಡುವಿನ ವಾಗ್ವಾದ ಮರುಕಳಿಸದಂತೆ ತಡೆಯಲು ಪೊಲೀಸರಿಂದ ಬಿಗಿ ಬಂದೋಬಸ್ತ್ ಆಯೋಜನೆಯಾಗಿತ್ತು.

ನಗರದ ಪ್ರಮುಖ ರಸ್ತೆ, ಮಸೀದಿ, ಮೂರ್ನಾಲ್ಕು ದಾರಿಗಳ ಬಳಿ ಸಂಚಾರಿ ಪೊಲೀಸರು ಬ್ಯಾರಿಕೇಡ್ ಅವಳಡಿಸಿ, ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರಾರ್ಥನೆ ಮುಕ್ತಾಯದ ನಂತರ ಎಲ್ಲ ಮುಸ್ಲಿಮರು ಒಟ್ಟಿಗೆ ಹೊರಬಂದ ಕಾರಣಕ್ಕೆ ಜಾಮಿಯಾ ಮಸೀದಿ ಮತ್ತು ಗಾಂಧಿವೃತ್ತದಿಂದ ಶಿವೆ ಟಾಕೀಸಿಗೆ ತೆರಳುವ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.

ಈದ್ಗಾ ಮೈದಾನ ಬಳಿ ತಹಶೀಲ್ದಾರ್‌ ಯು.ನಾಗರಾಜ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ.ಪಾಟೀಲ, ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಗರಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣಠಾಣೆ ಪಿಐ ಸೋಮಶೇಖರ ಜುತ್ತಲ್ ಸೇರಿದಂತೆ 150ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.