ADVERTISEMENT

ಕನಕಗಿರಿಯಲ್ಲಿ ಸಂಭ್ರಮದ ಗರುಡೋತ್ಸವ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 4:31 IST
Last Updated 14 ಮಾರ್ಚ್ 2023, 4:31 IST
ಕನಕಗಿರಿಯ ರಾಜಬೀದಿಯಲ್ಲಿ ಸೋಮವಾರ ನಸುಕಿನ ಜಾವ ಗರುಡೋತ್ಸವದ ಮೆರವಣಿಗೆ ನಡೆಯಿತು
ಕನಕಗಿರಿಯ ರಾಜಬೀದಿಯಲ್ಲಿ ಸೋಮವಾರ ನಸುಕಿನ ಜಾವ ಗರುಡೋತ್ಸವದ ಮೆರವಣಿಗೆ ನಡೆಯಿತು   

ಕನಕಗಿರಿ: ಸೋಮವಾರ ನಸುಕಿನ ಜಾವ ಗರುಡೋತ್ಸವ (ಕಲ್ಯಾಣೋತ್ಸವ) ಕಾರ್ಯಕ್ರಮ ನಡೆಯಿತು.

ಇಲ್ಲಿನ ಕನಕಾಚಲಪತಿ ಮಹಾ ರಥೋತ್ಸವದ ಹಿಂದಿನ ದಿನ ನಡೆಯುವ ಈ ಉತ್ಸವದ ವೀಕ್ಷಣೆಗೆ ರಾಜಬೀದಿಯಲ್ಲಿ ಜನಸಾಗರವೇ ಹರಿದು ಬಂದಿತ್ತು.

ದೇವಸ್ಥಾನದ ಪ್ರಾಂಗಣ, ಆವರಣ, ಮನೆ, ಮಾಳಿಗೆ ಹಾಗೂ ರಾಜಬೀದಿಯ ಎರಡು ಬದಿ ನಿಂತು ಗರುಡೋತ್ಸವದ ಮೆರವಣಿಗೆ ಸಂಭ್ರಮವನ್ನು ಭಕ್ತರು ಕಣ್ಣು ತುಂಬಿಸಿಕೊಂಡರು. ದೀವಟಗಿ, ಪಂಜಿನ ಬೆಳಕಿನಲ್ಲಿ ಕಂಗೊಳಿಸಿದ ಉತ್ಸವದ ಗತ ವೈಭವವನ್ನು ಮೆಲುಕು ಹಾಕುವಂತೆ ಮಾಡಿದ್ದಲ್ಲದೆ ಜನಮನ ಸೂರೆಗೊಂಡಿತು.

ADVERTISEMENT

ಕನಕಾಚಲಪತಿ ಹಾಗೂ ಲಕ್ಷ್ಮೀ ಕಲ್ಯಾಣೋತ್ಸವ (ವಿವಾಹ) ನಸುಕಿನ ಜಾವ ನಡೆಯಿತು. ಅರ್ಚಕರು, ವೇದ, ಆಗಮ ಪಂಡಿತರ ವೇದ, ಮಂತ್ರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಯುವಕರು, ಯುವತಿಯರು, ಮಕ್ಕಳು ಹೊಸ ಬಟ್ಟೆ ಧರಿಸಿ ಭಾಗವಹಿಸಿದ್ದರು. ಗರುಡೋತ್ಸವದ ಮುಂದೆ ಭಕ್ತರ ಕೈಯಲ್ಲಿದ್ದ ದೀವಟಗಿಯಲ್ಲಿ ಕರ್ಪೂರ ಹಾಗೂ ಕೊಬ್ಬರಿ ತುಂಡುಗಳನ್ನು ಹಾಕಿ ದಹಿಸಿದರು.

ಸೂರ್ಯೋದಯಕ್ಕಿಂತ ಮುಂಚೆ ಹಳದಿ ಬಣ್ಣದ ಗರುಡ ವಾಹನದ ಮೇಲೆ ಲಕ್ಷ್ಮೀ ಹಾಗೂ ನರಸಿಂಹ ದೇವರ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು. ನೆರೆದ ಸಾವಿರಾರು ಭಕ್ತರು ಗೋವಿಂದ, ಗೋವಿಂದ ಎನ್ನುತ್ತ ದೇವರ ಸ್ಮರಣೆ ಮಾಡಿ ಮುಂದಕ್ಕೆ ಸಾಗಿದರು. ಕನಕಾಚಲಪತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರಾಜಬೀದಿ ಮೂಲಕ ಎದುರ ಹನುಮಪ್ಪನ ದೇವಸ್ಥಾನ ತಲುಪಿ ಮತ್ತೆ ದೇವಸ್ಥಾನದವರೆಗೆ ನಡೆಯಿತು.

ಭಕ್ತರು ಹೂವಿನ ಹಾರ ಹಾಕಿದರು. ಉದ್ಯಮಿ ಸತೀಶ ಸೂರ್ಯಬಾಬು ಅವರು ಮೆರವಣಿಗೆಗೆ ಬೆಳಕಿನ ವ್ಯವಸ್ಥೆ ಮಾಡಿಸಿದ್ದರು.

ಶಾಸಕ ಬಸವರಾಜ ದಢೇಸೂಗೂರು, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ರಾಯಚೂರು ಜಿಲ್ಲೆ ಅಬಕಾರಿ ಉಪ ಆಯುಕ್ತೆ ಲಕ್ಷ್ಮೀ ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಾಂತಾ ರಮೇಶ ನಾಯಕ, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಯಾಳ, ಮುಖಂಡರಾದ ಪಿ.ವಿ.ರಾಜಗೋಪಾಲ, ಧರ್ಮಣ್ಣ, ಡಾ.ಚಾರೂಲ ವೆಂಕಟರಮಣ, ಸೇರಿ ಹಲವು ಮುಖಂಡರು, ಪಟ್ಟಣ ಪಂಚಾ ಯಿತಿ ಸದಸ್ಯರು ಭಾಗ ವಹಿಸಿದ್ದರು. ಮುಸ್ಲಿಂ ಸಮಾಜದ ನಬೀಸಾಬ ತಾಷವಾಲ ಸಹೋದರರ ತಾಷ ಮೇಳ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.