ADVERTISEMENT

ಗವಿಮಠದ ಜಾತ್ರೆಗೆ ಸಿದ್ಧತೆ ಜೋರು

ಜ. 1ರಿಂದ ಕಾರ್ಯಕ್ರಮ ಆರಂಭ, 5ರಂದು ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 4:47 IST
Last Updated 23 ಡಿಸೆಂಬರ್ 2025, 4:47 IST
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಮಹಾದಾಸೋಹದ ಮನೆಯಲ್ಲಿ ಊಟದ ಕೌಂಟರ್‌ಗಳನ್ನು ಸಿದ್ಧಗೊಳಿಸಿರುವುದು
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಮಹಾದಾಸೋಹದ ಮನೆಯಲ್ಲಿ ಊಟದ ಕೌಂಟರ್‌ಗಳನ್ನು ಸಿದ್ಧಗೊಳಿಸಿರುವುದು   

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿಯಾದ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ದಿನಗಣನೆ ಶುರುವಾಗಿದ್ದು, ಸಿದ್ಧತೆ ಕಾರ್ಯ ಚುರುಕು ಪಡೆದುಕೊಂಡಿವೆ.

ಗವಿಮಠದ ಮುಂಭಾಗದ ಜಾಗ, ಮೈದಾನದ ಆವರಣ, ಮಹಾದಾಸೋಹದ ಜಾಗ ಹೀಗೆ ವಿವಿಧ ಕಡೆ ಸಿದ್ಧತೆ ನಡೆಸಲಾಗುತ್ತಿದೆ. ಹಿಂದಿನ ವರ್ಷ ನಾಲ್ಕು ಎಕರೆ ಪ್ರದೇಶದಲ್ಲಿದ್ದ ಮಹಾದಾಸೋಹದ ಜಾಗವನ್ನು ಈ ಬಾರಿ ಆರು ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಲಾಗಿದೆ. ಏಕಕಾಲಕ್ಕೆ ಐದಾರು ಸಾವಿರ ಭಕ್ತರು ಏಕಕಾಲಕ್ಕೆ ಪ್ರಸಾದ ಸೇವಿಸಲು ವ್ಯವಸ್ಥೆ ಮಾಡಲಾಗಿದೆ.

ಜ. 1ರಿಂದ ಮಹಾದಾಸೋಹಕ್ಕೆ ಪ್ರತ್ಯೇಕ ಮಹಾದ್ವಾರ, ವಿಶಾಲವಾದ ದಾರಿ ವ್ಯವಸ್ಥೆ ಮಾಡಲಾಗಿದೆ. ಜ. 21ರ ತನಕ ದಾಸೋಹ ಇರಲಿದ್ದು, ಅಲ್ಲಿ ಜನಸಂದಣಿಯಾಗದಂತೆ ತಡೆಯಲು ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ಸೌಲಭ್ಯವಿದೆ. 

ADVERTISEMENT

ಮಹಾದಾಸೋಹಕ್ಕೆ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್ ಗಾರ್ಡನ್‍ನಲ್ಲಿರುವ ಆವರಣದಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ ನಿರ್ಮಿಸಲಾಗಿದೆ. ಸುಮಾರು 76 ಊಟದ ಕೌಂಟರ್‌ ಇರಲಿದೆ. ಜೋಳದ ರೊಟ್ಟಿ ಸಂಗ್ರಹಕ್ಕಾಗಿ ಎರಡು ದೊಡ್ಡ ತಾತ್ಕಾಲಿಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಏಕಕಾಲಕ್ಕೆ 250ರಿಂದ 300 ಜನ ನೀರು ಕುಡಿಯುವ ಸೌಲಭ್ಯವಿದೆ.

ಆಹಾರದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೋಲಿಸರು ಇರುತ್ತಾರೆ. ಪ್ರಸಾದ ನಿಲಯದ ಸುತ್ತಲೂ ಪೋಲಿಸ್ ಕಣ್ಗಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ. ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಜೋಳದ ರೊಟ್ಟಿ, ಪಲ್ಯ, ಸಿಹಿ ಪದಾರ್ಥಗಳು, ಅನ್ನ, ಸಾಂಬರ್, ಕಡ್ಲೆಚಟ್ನಿ, ಉಪ್ಪಿನಕಾಯಿ ಇರಲಿದೆ.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
ಗವಿಸಿದ್ಧೇಶ್ವರ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅನೇಕ ಭಕ್ತರ ಭಕ್ತಿಯ ಸೇವೆ ಹಾಗೂ ಪ್ರೀತಿಯಲ್ಲಿ ದೊಡ್ಡ ಕೆಲಸವೂ ಸರಾಗವಾಗಿ ಸಾಗುತ್ತದೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ

ಸೇವೆಗೆ ಹೆಸರು ನೋಂದಾಯಿಸಲು ಮನವಿ

ಗವಿಸಿದ್ಧೇಶ್ವರ ಜಾತ್ರೆಗೆ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಲು ಬಯಸುವವರ ಹೆಸರು ನೋಂದಾಯಿಸುವಂತೆ ಗವಿಮಠದ ಪ್ರಕಟಣೆ ಕೋರಿದೆ. ಸ್ವಚ್ಛತೆ ಮಹಾರಥೋತ್ಸವ ಮೈದಾನ ಮಠದ ರಸ್ತೆ ಮಹಾದಾಸೋಹದ ರಸ್ತೆ ಮಠದ ಆವರಣ ಕೈಲಾಸ ಮಂಟಪ ಪ್ರಸಾದ ತಯಾರಿಸುವ ಸ್ಥಳ ಜಾತ್ರಾ ಅಂಗಡಿ ಸ್ಥಳ ತರಕಾರಿ ಹೆಚ್ಚುವುದು ಪ್ರಸಾದ ತಯಾರಿಸುವುದು ಪ್ರಸಾದ ಬಡಿಸುವುದು ಅಡುಗೆ ಸಾಮಾನು ತೊಳೆಯುವುದು ರೊಟ್ಟಿ ಸಂಗ್ರಹಿಸುವುದು ಕಟ್ಟಿಗೆ ಹೊರುವುದು ಕಟ್ಟಿಗೆ ಒಡೆಯುವ ಸೇವೆ ಸಲ್ಲಿಸುವವರು ಮಾಹಿತಿ ನೀಡಬೇಕು. ಇನ್ನಷ್ಟು ಮಾಹಿತಿಗೆ 9844634990 ಸಂಪರ್ಕಿಸಬೇಕು.

ತರಹೇವಾರಿ ಊಟದ ಹೂರಣ

ಈ ಸಲದ ಗವಿಮಠದ ಜಾತ್ರೆಯಲ್ಲಿ 15ರಿಂದ 16 ಲಕ್ಷ ಜೋಳದ ರೊಟ್ಟಿ 800 ಕ್ವಿಂಟಲ್‌ ಅಕ್ಕಿ 900 ಕ್ವಿಂಟಲ್‌ ಸಿಹಿಪದಾರ್ಥ 400 ಕ್ವಿಂಟಲ್‌  ತರಕಾರಿ 350 ಕ್ವಿಂಟಲ್‌ ದ್ವಿದಳ ಧಾನ್ಯಗಳು 15ಸಾವಿರ ಲೀಟರ್‌ ಹಾಲು ಒಂದು ಸಾವಿರ ಕೆ.ಜಿ. ತುಪ್ಪ 5000 ಕೆ.ಜಿ. ಉಪ್ಪಿನಕಾಯಿ 15 ಕ್ವಿಂಟಲ್‌ ಪುಟಾಣಿ ಚಟ್ನಿ ಐದು ಕ್ವಿಂಟಲ್‌ ಕೆಂಪು ಚೆಟ್ನಿ ಹಾಗೂ 20 ಕ್ವಿಂಟಲ್‌ ಮಿರ್ಚಿಯ ರಸದೌತಣ ಭಕ್ತರಿಗೆ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.