ADVERTISEMENT

ಗವಿಸಿದ್ದೇಶ್ವರ ಜಾತ್ರೆ: ತೆಪ್ಪೋತ್ಸವ ಸಂಭ್ರಮ, ಮೊದಲ ಬಾರಿಗೆ ಗಂಗಾರತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 15:54 IST
Last Updated 5 ಜನವರಿ 2023, 15:54 IST
ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿರುವ ಕೆರೆಯಲ್ಲಿ ಗುರುವಾರ ನಡೆದ ತೆಪ್ಪೋತ್ಸವ ವಿದ್ಯುತ್‌ ದೀಪಗಳ ಬೆಳಕಿನ ಹೊಳಪಿನಲ್ಲಿ ಕಂಡು ಬಂದಿದ್ದು ಹೀಗೆ  –ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ
ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿರುವ ಕೆರೆಯಲ್ಲಿ ಗುರುವಾರ ನಡೆದ ತೆಪ್ಪೋತ್ಸವ ವಿದ್ಯುತ್‌ ದೀಪಗಳ ಬೆಳಕಿನ ಹೊಳಪಿನಲ್ಲಿ ಕಂಡು ಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ   

ಕೊಪ್ಪಳ: ಕಣ್ಣು ಹಾಯಿಸಿದಷ್ಟೂ ದೂರ ಬಣ್ಣಬಣ್ಣದ ವಿದ್ಯುತ್‌ ದೀಪಗಳ ಬೆಳಕು ಪ್ರಜ್ವಲಿಸುತ್ತಿದ್ದ ಇಲ್ಲಿನ ಗವಿಸಿದ್ದೇಶ್ವರ ಮಠದ ಆವರಣದ ಕೆರೆಯಲ್ಲಿ ಗುರುವಾರ ಸಂಭ್ರಮದಿಂದ ತೆಪ್ಪೋತ್ಸವ ಜರುಗಿತು.

ದೀಪಗಳ ಹೊಳಪು ಒಂದೆಡೆಯಾದರೆ, ಎರಡು ವರ್ಷಗಳ ಬಳಿಕ ನಡೆದ ತೆಪ್ಪೋತ್ಸವದ ಸಡಗರ ಭಕ್ತರನ್ನು ಮಂತ್ರಮುಗ್ದರನ್ನಾಗಿಸಿತು. ಗವಿಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಗಂಗಾರತಿ ಮಾಡಲಾಯಿತು. ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡುತ್ತಿದ್ದಂತೆಯೇ ಭಕ್ತರಿಂದ ‘ಗವಿಸಿದ್ದೇಶ್ವರ... ಗವಿಸಿದ್ದೇಶ್ವರ’ ಎನ್ನುವ ಘೋಷಣೆ ಮೊಳಗಿದವು.

ಜಾತ್ರಾ ಮಹೋತ್ಸವದಲ್ಲಿ ಕಣ್ಮನ ಸೆಳೆದ ತೆಪ್ಪೋತ್ಸವದ ವೇಳೆ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ತಂದು ಅಲಂಕೃತಗೊಳಿಸಿ ಪಲ್ಲಕ್ಕಿಯಲ್ಲಿ ಇರಿಸಿ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಅಂಬಿಗರು ಹುಟ್ಟು ಹಾಕಿ ಸಾಗಿಸಿದರು.

ADVERTISEMENT

ಪ್ರಾಕೃತಿಕ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ಗವಿಮಠದ ಆವರಣದಲ್ಲಿ ಗವಿಮಠದ ಕೆರೆ ಅಕ್ಷರಶಃ ಹುಣ್ಣಿಮೆಯ ಸರೋವರದಂತೆ ಕಂಡುಬಂತು. ಗವಿಸಿದ್ಧೇಶ್ವರನ ಮೂರ್ತಿ ಹೊತ್ತು ತೆಪ್ಪ ಕೆರೆಯಲ್ಲಿ ಸುತ್ತು ಹಾಕುತ್ತಿದ್ದರೆ ಕಲಾವಿದರಾದ ಶಕುಂತಲಾ ಬಿನ್ನಾಳ ಹಾಗೂ ತಂಡದವರು ‘ಗವಿಸಿದ್ಧೇಶ್ವರ ಸುಪ್ರಭಾತ’ ಎಂದು ಹಾಡು ಹಾಡಿದರು.

ಹರಪನಹಳ್ಳಿ ತಾಲ್ಲೂಕಿನ ತವಡೂರದ ಕರುಣಂ ಕೊಟ್ರಪ್ಪ ರಚಿಸಿದ ‘ಕೊಪ್ಪಳ ಮಹಾತ್ಮ ಗವಿಸಿದ್ಧೇಶ್ವರ ಸ್ವಾಮಿ ಚರಿತ್ರೆ’ ಗ್ರಂಥವನ್ನು ಮತ್ತು ಮುನಿರಾಬಾದಿನ ನಿವೃತ್ತ ಎಂಜಿನಿಯರ್‌ ಕೆ.ಎಂ.ಬಸವರಾಜ್ ಅವರ ಆಡಿಯೊ ಬಿಡುಗಡೆ ಮಾಡಲಾಯಿತು. ತೆಪ್ಪೋತ್ಸವದ ಸಡಗರಕ್ಕೆ ಗಾಯಕ ಪಂ. ಬಾಲಚಂದ್ರ ನಾಕೋಡ ಅವರ ಸಂಗೀತ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.