
ಕೊಪ್ಪಳ: ಜಿಲ್ಲೆಯ ಕುಕನೂರು ತಾಲ್ಲೂಕಿನ ಗ್ರಾಮವೊಂದರ ಡಿ. ದೇವರಾಜ ಅರಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಹತ್ತನೇ ತರಗತಿ ಓದುತ್ತಿದ್ದ ಬಾಲಕಿ ಹಾಸ್ಟೆಲ್‌ನ ಶೌಚಾಲಯದಲ್ಲಿ ಬುಧವಾರ ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ಯುವಕ ಹನುಮನಗೌಡ ಬತ್ತಿ ಎಂಬಾತನನ್ನು ಬಂಧಿಸಲಾಗಿದೆ.
ಬಾಲಕಿಯ ರಕ್ಷಣೆಗೆ ನಿಗಾ ವಹಿಸದ ವಸತಿ ನಿಲಯದ ಮೇಲ್ವಿಚಾರಕಿ ಶಶಿಕಲಾ ಹಿರೇಮಠ, ಅಡುಗೆ ಕೆಲಸಗಾರರಾಗಿದ್ದ ಪಾರ್ವತಿ ಕುದಿರಿಮೋತಿ ಹಾಗೂ ಪ್ರಿಯಾಂಕಾ ಸಿಂಧೋಗಿ ಅವರನ್ನು ಅಮಾನತು ಮಾಡಲಾಗಿದೆ. ಆರೋಪಿ ಹನುಮನಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಕುಕನೂರು ತಂಡದ ವೈದ್ಯಾಧಿಕಾರಿಗಳಾದ ಭರತೇಶ ಹಿರೇಮಠ ಹಾಗೂ ಸಬೀಯಾ ಅವರ ಮೇಲೆ ಎಫ್ಐಆರ್ ದಾಖಲಾಗಿದೆ.
ವಸತಿ ನಿಲಯವಿರುವ ಗ್ರಾಮದ ಶಾಲೆಯಲ್ಲಿ ಎಂಟನೇ ತರಗತಿಯಿಂದಲೇ ಓದುತ್ತಿರುವ ಬಾಲಕಿಗೆ ಆರೋಪಿ ಮೊದಲಿನಿಂದ ಪರಿಚಿತನಾಗಿದ್ದ.
‘ಹನುಮನಗೌಡ ನನ್ನನ್ನು ಪ್ರೀತಿಸುತ್ತಿದ್ದ. ಮುಂದೆ ಮದುವೆಯಾಗುವುದಾಗಿ ಹೇಳಿ ಶಾಲೆ ಬಿಟ್ಟ ನಂತರ ಹಲವು ಬಾರಿ ಆತ ಲೈಂಗಿಕ ಸಂಪರ್ಕ ಮಾಡಿದ್ದಾನೆಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ಬಾಲಕಿಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ನೀಡಿದ ದೂರಿನ ಮೇರೆಗೆ ಕುಕನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವೈದ್ಯರ ಮೇಲೂ ಎಫ್‌ಐಆರ್
ವಸತಿ ನಿಲಯಗಳ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿ ಪ್ರತಿತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಮಗುವಿಗೆ ಜನ್ಮ ನೀಡಿದ ಬಾಲಕಿಯ ಆರೋಗ್ಯ ತಪಾಸಣೆಯನ್ನು ಎರಡು ತಿಂಗಳ ಹಿಂದೆ ಮಾಡಲಾಗಿದ್ದು, ಬಾಲಕಿ ಗರ್ಭಿಣಿಯಾದ ವಿಷಯವನ್ನು ವೈದ್ಯಾಧಿಕಾರಿಗಳು ಪತ್ತೆ ಹಚ್ಚಿಲ್ಲ. ಆದ್ದರಿಂದ ಕರ್ತವ್ಯ ಲೋಪದ ಮೇಲೆ ಇಬ್ಬರು ವೈದ್ಯಾಧಿಕಾರಿಗಳ ಮೇಲೂ ಎಫ್‌ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.