ADVERTISEMENT

ಕಾರಟಗಿ: ಕಾರ್ಮಿಕನ ಮಗಳಿಗೆ ಚಿನ್ನದ ಕಿರೀಟದ ಗರಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:51 IST
Last Updated 25 ಡಿಸೆಂಬರ್ 2025, 4:51 IST
ರೇಖಾ
ರೇಖಾ   

ಕಾರಟಗಿ: ಬಡತನದ ಸವಾಲುಗಳ ಮಧ್ಯೆಯೇ ಓದುವ ಛಲ ಹೊಂದಿದ್ದ ಕಾರ್ಮಿಕರೊಬ್ಬರ ಮಗಳು ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕದೊಂದಿಗೆ ನಗೆ ಬೀರಿದ್ದಾರೆ.

ಪಟ್ಟಣದ ಕಸ್ತೂರಬಾ ಮಹಿಳಾ ಪದವಿ ಮಹಾವಿದ್ಯಾಲಯದ ಬಿ.ಕಾಂ ವಿದ್ಯಾರ್ಥಿನಿ ಕೆ.ರೇಖಾ ಪರಶುರಾಮ ಅವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ನಡೆದ ಪರೀಕ್ಷೆಯಲ್ಲಿ ಶೇ 95.6ರಷ್ಟು ಅಂಕ ಗಳಿಸಿ, ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿಯ ತಂದೆ ಪರಶುರಾಮ ಕೂಲಿ ಕಾರ್ಮಿಕ. ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೂವರು ಹೆಣ್ಣು ಮಕ್ಕಳನ್ನು ಓದಿಸುತ್ತಾ ದೈನಂದಿನ ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿನಿ ರೇಖಾ ಸವಾಲುಗಳನ್ನು ಮೆಟ್ಟಿನಿಂತು ನಿರಂತರ ಅಧ್ಯಯನ, ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ವಿದ್ಯಾರ್ಥಿನಿ ರೇಖಾಗೆ ಕಾಲೇಜಿನ ಶುಲ್ಕ ಭರಿಸುವುದೇ ಸವಾಲಾಗಿ, ವಿದ್ಯಾಭ್ಯಾಸವನ್ನೇ ನಿಲ್ಲಿಸುವ ಸ್ಥಿತಿ ಎದುರಾಗಿತ್ತು. ಇದೆಲ್ಲವನ್ನೂ ಮೆಟ್ಟಿನಿಂತು ಚಿನ್ನದ ಪದಕದ ಕಿರೀಟವನ್ನು ಇದೀಗ ಹೊತ್ತಿದ್ದಾರೆ.

ವಿದ್ಯಾರ್ಥಿನಿ ರೇಖಾ ಪ್ರತಿಕ್ರಿಯಿಸಿ,‘ನಿರಂತರ ಅಧ್ಯಯನ, ಉಪನ್ಯಾಸಕರ ಮಾರ್ಗದರ್ಶನದಿಂದ ಗುರಿ ಸಾಧಿಸಲು ಸಾಧ್ಯವಾಗಿದೆ. ಅವರೆಲ್ಲರಿಗೂ ಸದಾ ಋಣಿಯಾಗಿರುತ್ತೇನೆ’ ಎಂದರು.

ಕಾಲೇಜಿನ ಆಡಳಿತ ಮಂಡಳಿ ಮುಖ್ಯಸ್ಥರು, ಉಪನ್ಯಾಸಕರು ವಿದ್ಯಾರ್ಥಿನಿ ರೇಖಾ ಅವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.