ADVERTISEMENT

ಕೊಪ‍್ಪಳ ಜಿಲ್ಲೆಯಲ್ಲಿ ಚಿನ್ನದ ಅದಿರಿಗೆ ಶೋಧ ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 12:24 IST
Last Updated 17 ಅಕ್ಟೋಬರ್ 2021, 12:24 IST
ತಾವರಗೇರಾ ಸಮೀಪದ ನಾರಿನಾಳ ಗ್ರಾಮದಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಶೋಧನಾ ಸಂಸ್ಥೆಯವರು ಬಂಗಾರದ ಅದಿರು ಪತ್ತೆ ಶೋಧನೆ ಮಾಡುತ್ತಿರುವುದು.
ತಾವರಗೇರಾ ಸಮೀಪದ ನಾರಿನಾಳ ಗ್ರಾಮದಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಶೋಧನಾ ಸಂಸ್ಥೆಯವರು ಬಂಗಾರದ ಅದಿರು ಪತ್ತೆ ಶೋಧನೆ ಮಾಡುತ್ತಿರುವುದು.   

ತಾವರಗೇರಾ: ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿಯ ನಾರಿನಾಳ ಗ್ರಾಮದಲ್ಲಿ ಬಂಗಾರದ ಅದಿರು ಪತ್ತೆಗಾಗಿ ಸಮೀಕ್ಷಾ ತಂಡವು ಬೀಡುಬಿಟ್ಟಿದೆ. ಅದಿರು ಸಮೀಕ್ಷೆಗಾಗಿ ತಂಡವು ಡಿಗ್ಗಿಂಗ್ ಮೂಲಕ ಪರಿಶೀಲನೆ ಕೈಗೊಂಡಿದೆ.

ಗ್ರಾಮದ ಜಮೀನೊಂದರಲ್ಲಿ ಬಂಗಾರ ಅದಿರು ಪತ್ತೆಗಾಗಿ ಕೇಂದ್ರ ಸರ್ಕಾರದ ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ಪರಿಣತರ ತಂಡವು ಹಗಲಿರುಳು ಸಮೀಕ್ಷೆ ಕೈಗೊಂಡಿದೆ. ಶೋಧನೆಗಾಗಿ ಭೂಮಿಯ ಆಳದಲ್ಲಿ 113 ಮೀಟರ್‌ವರೆಗೆ ಕೊರೆದಿರುವ ತಂಡವು ಬಂಗಾರದ ಅದಿರು ಪತ್ತೆಯಾಗಿರುವ ಮಾಹಿತಿಯನ್ನು ಹೊರಹಾಕಿದೆ.

ಭೂಗರ್ಭದಲ್ಲಿನ ಬಹುತೇಕ ಖನಿಜಯುಕ್ತ ಕಲ್ಲುಗಳನ್ನು ಸಮೀಕ್ಷಾ ತಂಡವು ಈಗಾಗಲೇ ಸಂಗ್ರಹಿಸಿದೆ. ಇದರ ಸಮೀಪದಲ್ಲಿರುವ ಮ್ಯಾದರಡೊಕ್ಕಿ ಗ್ರಾಮದ ಜಮೀನಿನಲ್ಲಿ ಈ ಹಿಂದೆ ಮ್ಯಾಂಗನೀಸ್ ಪತ್ತೆಯಾಗಿತ್ತು. ಈಗ ನಾರಿನಾಳ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಬಂಗಾರದ ಅದಿರು ಪತ್ತೆಯಾಗಿರುವುದು ಈ ಭಾಗದ ಜಮೀನುಗಳಿಗೆ ಮತ್ತಷ್ಟು ಬೆಲೆ ಬಂದಂತಾಗಿದೆ.

ADVERTISEMENT

ಕಲ್ಲು ಮಿಶ್ರಿತವಾಗಿರುವ ಈ ಭಾಗದ ಜಮೀನುಗಳಿಗೆ ಬಂಗಾರದ ಅದಿರು ಪತ್ತೆಯಾಗಿರುವುದರಿಂದ ಜಮೀನುಗಳಿಗೆ ಬೇಡಿಕೆ ಇದೆ. ಈ ಕುರಿತು ಕಳೆದ 2017 ರಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಅಲ್ಫಾ ಜಿಯೊ ಇಂಡಿಯಾ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆಯು ಈ ಭಾಗದಲ್ಲಿ ಖನಿಜ ಸೇರಿದಂತೆ ಬೆಲೆ ಬಾಳುವ ತೈಲಗಳನ್ನು ಹೊಂದಿರುವ ಕುರಿತು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಂಗಾರದ ಅದಿರು ಪತ್ತೆಯಾಗಿರುವದರಿಂದ ಈ ಭಾಗದ ಜಮೀನುಗಳಿಗೆ ಉತ್ತಮ ಬೆಲೆ ಸಿಗುವುದು ಎನ್ನುತ್ತಾರೆ ಸ್ಥಳೀಯರು.

***

ಗಣಿ ಭೂವಿಜ್ಞಾನ ಇಲಾಖೆ ಮತ್ತು ಕುಷ್ಟಗಿ ತಹಶೀಲ್ದಾರ್‌ ಅವರಿಗೆ ಪರಿಶೀಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು.
ಸುರಳ್ಕರ್ ವಿಕಾಸ್ ಕಿಶೋರ್. ಜಿಲ್ಲಾಧಿಕಾರಿ

ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಪ್ರದೇಶದಲ್ಲಿನ ಅದಿರಿನಲ್ಲಿ ಚಿನ್ನದ ಅಂಶ ಪತ್ತೆಯಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಇದೇ ಎಂಬುದನ್ನು ಸಂಶೋಧನಾ ತಂಡವು ದೃಡಪಡಿಸಬೇಕಿದೆ.
ಮುತ್ತಪ್ಪ, ಹಿರಿಯ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೊಪ್ಪಳ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.